ಕುಂದಾಪುರ : ಬ್ರಹ್ಮಶ್ರೀ ನಾರಾಯಣಗುರುಗಳ 167 ನೇ ಜನ್ಮ ಜಯಂತಿಯ ಪ್ರಯುಕ್ತ ವಾಹನ ಜಾಥಾ
Posted On:
29-08-2021 10:06PM
ಕುಂದಾಪುರ : ಶ್ರೀ ನಾರಾಯಣಗುರು ಯುವಕ ಮಂಡಲ ಕುಂದಾಪುರ ಇವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿಯ ಪ್ರಯುಕ್ತ ಬೃಹತ್ ವಾಹನ ಜಾಥಾ ಕಾರ್ಯಕ್ರಮವನ್ನು ಇಂದು ಹಿರಿಯರಾದ ಕಾಳಪ್ಪ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಅಧ್ಯಕ್ಷರು ಅಶೋಕ್ ಪೂಜಾರಿ ಹಾಗೂ ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಅಧ್ಯಕ್ಷರಾದ ಶ್ರೀನಾಥ ಕಡ್ಗಿಮನೆ ಚಾಲನೆ ನೀಡಿದರು.
ಶ್ರೀ ನಾರಾಯಣ ಗುರು ಮಂದಿರದಿಂದ ಸರಿ ಸುಮಾರು 50 ಕಾರುಗಳ ಮೂಲಕ ಪುರ ಮೆರವಣಿಗೆ ಹೊರಟಾಗ ಹಲವಾರು ಕಡೆ ಜಾತಿ, ಮತ ಬೇಧವಿಲ್ಲದೆ ಪುರಸಭೆ ಸದಸ್ಯರುಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಶಾಸ್ತ್ರಿ ಸರ್ಕಲ್ ಸುತ್ತುವರೆದು ಚರ್ಚ್ ರಸ್ತೆಯ ಮೂಲಕ ಕೋಡಿ ಚಕ್ರಮ್ಮ ದೇವಸ್ಥಾನ ತಲುಪಿ ವಾಹನ ಜಾಥ ಸಂಪನ್ನಗೊಂಡಿತು.
ತದನಂತರ ಕೋಡಿ ಚಕ್ರಮ್ಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿ ಪ್ರಯುಕ್ತ ಗುರುಗಳಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ‘ನಾರಾಯಣ ಗುರು ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರು. ಕೇರಳದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದವರು. ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾನುಭಾವರು. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಜಾತ್ಯಾತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕರಾಗಿದ್ದ ಅವರು ಓರ್ವ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದರು. ನಾರಾಯಣ ಗುರುಗಳ ಜೀವನಾದರ್ಶಗಳ ಕುರಿತು ಸಭೆಯನ್ನುದ್ದೇಶಿಸಿ ಗಣ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀನಾಥ ಕಡ್ಗಿಮನೆ ಅಧ್ಯಕ್ಷರು ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ, ಗಣೇಶ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಬೈಂದೂರು, ಗೋಪಾಲಕೃಷ್ಣ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಕೋಡಿ, ಗೋಪಾಲ ಪೂಜಾರಿ ಮೊಕ್ತೇಸರು ಚಕ್ರಮ್ಮ ದೇವಸ್ಥಾನ ಕೋಡಿ, ಶಂಕರ್ ಪೂಜಾರಿ ಕೋಡಿ, ಮಹೇಶ್ ಪೂಜಾರಿ, ಗ್ರಾಮಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು.