ಉಡುಪಿ : ರೋಟರಿ ಜಿಲ್ಲೆ 3150 ರ ಹೈದರಾಬಾದ್ ಕ್ಲಬ್ ಮತ್ತು ರೋಟರಿ ಜಿಲ್ಲೆ 3182 ರ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಸಂಸ್ಥೆಗಳ ವತಿಯಿಂದ ಪಕ್ಕಿಬೆಟ್ಟು ಗ್ರಾಮದ ನಿವಾಸಿಯಾದ ಲೀಲಾವತಿ ಗಾಣಿಗ ಇವರ ಮನೆಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯನ್ನು ರೋಟರಿ ರೋಶ್ನಿ ಕಾರ್ಯಕ್ರಮದಡಿ ಒದಗಿಸಿಕೊಡಲಾಯಿತು.
ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಕಾರಣಗಳಿಂದಾಗಿ ಇವತ್ತಿನವರೆಗೂ ವಿದ್ಯುತ್ ಬೆಳಕನ್ನು ಹೊಂದಲು ವಿಫಲರಾದ ಸುಮಾರು 65 ವಯೋಮಾನದ ಇವರು ಇಂದು ಸಣ್ಣ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹೇಳಿ ಯಾವುದೇ ಭೌಗೋಳಿಕ ಮಿತಿ ಹೊಂದದ ರೋಟರಿಯ ಬಾಂಧವ್ಯ ಮತ್ತು ಸದಸ್ಯರುಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು.
ವೇದಿಕೆಯಲ್ಲಿ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಕ್ಲಬ್ ಗಳ ಅಧ್ಯಕ್ಷ ರಾದ ಶಂಭುಶಂಕರ್, ಪ್ರಸಾದ್ ಭಟ್, ಕಾರ್ಯದರ್ಶಿಗಳಾದ ಪ್ರಕಾಶ್, ಅಣ್ಣಯ್ಯ ದಾಸ್, ವಲಯ ಸೇನಾನಿಯವರುಗಳಾದ ಬ್ರಾಯನ್ ಡಿಸೋಜ, ವಿಜಯ್ ಕುಮಾರ್ ಶೆಟ್ಟಿ , ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಲೆನ್ ಲೂವಿಸ್, ಸತೀಶ್, ಬ್ಯಾಪ್ಟಿಸ್ಟ್ ಡಯಾಸ್ ಮತ್ತಿತರ ರೋಟರಿ ಗಣ್ಯರು ಉಪಸ್ಥಿತರಿದ್ದರು.