ಚೌತಿದಾನಿ ಕಟಿ ಇಲ್ಲ್ ಬುಡಂದೆ ಸಾರ್ಪತ್ಯ ಆವೊಂದುಪ್ಪೊಡು
Posted On:
09-09-2021 09:11AM
ಜಾನಪದದ ಸರಳ - ಮುಗ್ಧ ಕಲ್ಪನೆಯಿಂದ
ವೈದಿಕದ ವೈಭವೋಪೇತ ಚಿಂತನೆಯವರೆಗೆ . ಬೇಟೆ
ಸಂಸ್ಕೃತಿಯಿಂದ ತೊಡಗಿ ಆಧುನಿಕ ಜೀವನ -
ವಿಧಾನದ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ
ಮಹಾಗಣಪತಿಯ ಸ್ವೀಕಾರ - ಪೂಜಾ ವಿಧಾನಗಳ
ರೋಚಕ ಇತಿಹಾಸ ವಿದೆ. ಒಂದು ಸಂಸ್ಕೃತಿಯ
ಸಂಕೇತವಾಗಿ, ಒಬ್ಬಗಣವಾಗಿ, ಬ್ರಹ್ಮಣಸ್ಪತಿಯಾಗಿ,
ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ
ಪ್ರಪಂಚದಲ್ಲಿ ಏರಿದ ಎತ್ತರ ಊಹನಾತೀತ.
ಆಸ್ತಿಕ-ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ
ದೇವರು ಗಣಪತಿ. ಜಾತಿ-ಮತ-ಪಂಥಗಳ
ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ
ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ
ದೇವರು ವಿಶ್ವಂಭರ ಮೂರ್ತಿಯಾಗಿ ಬೆಳೆದದ್ದು,
ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು
ಮಾತ್ರ ಸತ್ಯ.
ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು. ಜೀವನ ಸುಂದರ ಹಾಗೂ ನಿರರ್ಗಳವಾಗಿರಬೇಕೆಂದು ನಿರೀಕ್ಷಿಸುವುದರಿಂದಲೇ ನಿರಂತರತೆಗೆ ಭಂಗವಾದಾಗ, ಅಡ್ಡಿ-ಆತಂಕಗಳು ಎದುರಾದಾಗ ಕಾರ್ಯಾರಂಭಗಳಿಗೆ
ವಿಘ್ನ-ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನ ಹರಿದಿರಬೇಕು. ಈ ಪರಿಣಾಮವಾಗಿ ‘ವಿಘ್ನ ನಿವಾರಕ' ದೇವರೊಬ್ಬನು ಸಾಕಾರಗೊಂಡಿರಬೇಕು.
ಭಾರತೀಯರಾದ ನಮಗೆ ಕೋಟ್ಯಂತರ ದೇವತೆ-ದೇವರುಗಳು ಆದರೂ ಗೊಂದಲವಿಲ್ಲದ ಆಧ್ಯಾತ್ಮಿಕ ಬದುಕು. ಇದು ಈ ಸಂಸ್ಕೃತಿಯ ವಿಚಾರಿಕ ವೈಶಾಲ್ಯ.
ಈ ವಿಸ್ತೃತ ವ್ಯಾಪ್ತಿಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ.ಅಮೂರ್ತವಾದುದರ ಮೂರ್ತ ಚಿಂತನೆ, ಅಲೌಕಿಕದ ಲೌಕಿಕ ದರ್ಶನ,
ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ-ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ. ಸಂಸ್ಕೃತಿಯ ಮೂಲದಲ್ಲೇ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ
ಇದಾದುದರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ. ಗಾಢವಾಗಿ ಬೇರೂರಿದೆ.
ಬೇಟೆಗಾರರ ಒಡೆಯ : ಗಣಪತಿಯ ಮೂರ್ತಿ ಶಿಲ್ಪದಲ್ಲೆ ಪ್ರಾಚೀನತೆಯನ್ನು ನಿಖರವಾಗಿ ಗುರುತಿಸುವ ವಿದ್ವಾಂಸರು ಈತನ ಅಸ್ತಿತ್ವಕ್ಕೆ ಬೇಟೆ ಸಂಸ್ಕೃತಿಯಷ್ಟು ಪುರಾತನ
ಇತಿಹಾಸವನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ. ಮಾನವ ವಿಕಾಸದ ಒಂದು ಹಂತ ಅಥವಾ ಆರಂಭವನ್ನು
ಬೇಟೆ ಸಂಸ್ಕೃತಿಯಿಂದ ಆರಂಭಿಸಿದರೆ ಬೇಟೆಗಾರರ ಒಡೆಯನೆಂದು ಗುರುತಿಸಬಹುದು.
ಕಲ್ಲಿನ ವಿವಿಧ ಆಕೃತಿಗಳನ್ನು ಆಯುಧದ ತೀಕ್ಷ್ಣತೆಗೆ ಬೇಕಾಗಿ ಬಳಸಿಕೊಳ್ಳಲಾರಂಭಿಸಿದ ಮನುಷ್ಯನಿಗೆ ಪ್ರಕೃತಿಯಲ್ಲಿ ಕಂಡದ್ದು ‘ಬೆಣಚುಕಲ್ಲು' .
ಬೇಟೆಯೇ ಪ್ರಧಾನ ಜೀವನಾಧಾರ, ಬೇಟೆಗೆ ಬೆಣಚುಕಲ್ಲೇ ಪ್ರಧಾನ ಆಯುಧ.ಇಲ್ಲಿಂದಲೇ ಬೆಣಚುಕಲ್ಲಿನಿಂದ ಬೆನಕನೆಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು.
ಇಂದಿಗೂ ಈ ಶೈಲಿಯ ಪೂಜೆ ರೂಢಿಯಲ್ಲಿದೆ. ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ.ಬೇಟೆಯಿಂದ ಮುಂದುವರಿದ ಮಾನವ ವಿಕಾಸ ದೃಢವಾಗಿ ಬೇರೂರಿದ್ದು
ನದಿ ದಡಗಳಲ್ಲಿ ಕೃಷಿಯನ್ನು ಸಂಶೋಧಿಸಿ, ಜೀವನಾಧಾರವೆಂದು ನಂಬಿ.ಪರಿಶ್ರಮವಿಲ್ಲದ ಕೃಷಿ ಇಲ್ಲ. ತಾಯಿ ಪಾರ್ವತಿ ಕೃಷಿ ಕ್ಷೇತ್ರವಾಗಿ, ಮಗ ಗಣಪ ಕೃಷಿ ಸಮೃದ್ಧಿಯಾಗಿ ಪರಿಗ್ರಹಿಸಲ್ಪಡುತ್ತಾರೆ. ಪಾರ್ವತಿಯ ಮೈಯ ಮಣ್ಣಿನಿಂದ
ರೂಪುಗೊಳ್ಳುವವನು ಗಣಪನೆಂಬ ಚಿಂತನೆಗೆ ಇಲ್ಲಿ ಆಧಾರ ಸಿಗುತ್ತದೆ. ಬೆವರು,ಮೈಯಮಣ್ಣು ಇವೆಲ್ಲ ಶ್ರಮದ ಬದುಕಿನ ಸಂಕೇತಗಳಾಗುತ್ತವೆ. ಇದು ಮಣ್ಣಿನ ಮಗನ ಮೂಲ.
ಕಪಿಲವರ್ಣ - ಕಾವಿ - ಮಣ್ಣಿನ ಬಣ್ಣ. ಧೂಮ್ರ ವರ್ಣ - ಕಪ್ಪು ಕೆಂಪು ವರ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೇ. ಇದು ವಿಘ್ನೇಶನಮೈ ಬಣ್ಣ.
ಪಶುಪಾಲನೆ : ಭೂ ಫಲವತ್ತತೆಗಾಗಿ ಸೆಗಣಿ (ಕೃಷಿ ಸಂಸ್ಕೃತಿಗೆ ಪೂರಕವಾಗಿ ಬೆಳೆದ ಪಶುಪಾಲನೆಯ ಫಲವಾಗಿ ಪಡೆದದ್ದು). ಈ ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು
ಪೂಜಿಸುವ ಕ್ರಮವೊಂದು ರೂಢಿಯಲ್ಲಿದೆ ಎಂಬುದನ್ನು ನೆನಪಿಸಿಕೊಳ್ಳೋಣ.
ಶಿವ-ಪಾರ್ವತಿಯರು ಸೂರ್ಯ-ಪೃಥ್ವಿಯ ಸ್ವರೂಪ. ಮಳೆಗಾಲದಲ್ಲಿ ಸೂರ್ಯನು ಮೋಡಗಳ ಹಿಂದೆ ಮರೆಯಾಗುತ್ತಾನೆ. ಭೂ ದೇವಿಗೆ (ಪೃಥ್ವಿಗೆ)
ಮಳೆ ನೀರಿನ ಸ್ನಾನವಾಗುತ್ತದೆ. ಆಗ ಬೆಳೆದು ನಿಲ್ಲುವ ಬೆಳೆಯೇ ಮಣ್ಣಿನ ಮಗ ಗಣಪ. ತಿಂಗಳು ಉರುಳಿದಂತೆ ಮಳೆ-ಮೋಡ ಕಡಿಮೆಯಾಗುತ್ತಾ ಸೂರ್ಯ ಪ್ರಜ್ವಲಿಸಲಾರಂಭಿಸುತ್ತಾನೆ. ಪೃಥ್ವಿಯನ್ನು ಅಥವಾ ಭೂಮಿಯನ್ನು ಸ್ಪರ್ಶಿಸಲು ಬೆಳೆದ ಬೆಳೆ
ಅಡ್ಡ ಬರುತ್ತದೆ. ಆಗ ಬೆಳೆಯ ತಲೆಯನ್ನು ಕತ್ತರಿಸಲಾಗುತ್ತದೆ. ಭೂಮಿ ಶೋಕತಪ್ತ ತಾಯಿಯಂತೆ ಕಾಣುತ್ತಾಳೆ. ಕೊಯ್ದ ಬೆಳೆ ಆನೆಯಂತೆ ರಾಶಿ ಬಿದ್ದಿರುತ್ತದೆ. ಪಾರ್ವತಿಯ ಮೈಯ ಮಣ್ಣಿನಿಂದ ಹುಟ್ಟಿದ ಗಣಪನೆಂದರೆ ಈ
ಬೆಳೆ. ಪ್ರಾಚೀನಕಥೆಗೆ ಪೂರಕವಾದ ಈ ಕಥೆಯೂ ಜಾನಪದ ಕಥಾನಕವಾಗಿದೆ ಎನ್ನುತ್ತಾರೆ
ಸಂಶೋಧಕರು. ಈ ಕಥೆ ಪ್ರಚಲಿತವಿರುವ ಕಥೆಯಂತೆಯೇ. ಆದರೆ ಕೃಷಿ ಸಂಸ್ಕೃತಿಯ ಕಾಲವನ್ನು ಪ್ರತಿಪಾದಿಸುತ್ತದೆ. ಗಣಪನ ಕಲ್ಪನೆಯ
ಮೂಲವನ್ನು ದೃಢೀಕರಿಸುವುದಿಲ್ಲವೆ?
|ಸಾರ್ಪತ್ಯ ಆವೊಂದುಪ್ಪೊಡು|
• ಜನಪದದ ಹೆಣ್ಣು ಮೈಸಗೆಯನ್ನು ಶಿವ ಪ್ರೀತಿಸುವುದು. ತಾವರೆ ಹೂವಾಗುವುದು, ಗುಟ್ಟಿನಲ್ಲಿ ಜೊತೆಯಾಗುವುದು ಹೀಗೆ ಮುಂದುವರಿಯುವ
ಕಥೆಯಲ್ಲಿ ಬಾಮಕುಮಾರನ ಜನನ. ಈತ ಗಜಮುಖನಾಗುವುದು. ಪಾರ್ವತಿ ಮಗುವನ್ನು ಸಾಕುವುದು. ಒಂದು ರೀತಿಯ ಸುಗಮವಾದ ರೀತಿಯಲ್ಲಿ ಮೈಸಗೆಯನ್ನು ಪಾರ್ವತಿ ಸ್ವೀಕರಿಸುವುದು. ಪ್ರತಿ ಮನೆಯಲ್ಲೂ ಗಣಪತಿ ಪೂಜೆ
ನಡೆಯಬೇಕು. ಅಲ್ಲೆಲ್ಲ ಗಣಪತಿ ‘ಸಾರ್ಪತ್ಯ ಆವೊಂದುಪ್ಪೊಡು' ಎಂಬುದು. ಶಿವನ ವರ, ಇದು ಬಾಮಕುಮಾರ ಸಂಧಿಯಲ್ಲಿ ಬರುತ್ತದೆ.
• ಮನೆಯಲ್ಲಿ ಪೂಜೆ, ದೈವಗಳಿಗೆ, ನಾಗನಿಗೆ ವಿಶೇಷ ಚೌತಿ ಪೂಜೆ ನಡೆಯುತ್ತದೆ. ಗರೋಡಿ, ಸ್ಥಾನಗಳಲ್ಲೂ ಚೌತಿ ಪೂಜೆ ನಡೆಯುತ್ತವೆ.
• ಪ್ರಾಚೀನವಾದರೂ ಬಲಗುಂದದ ಆರಾಧನಾ ಕ್ರಮವಾಗಿ ಗಣಪತಿ ಆರಾಧನೆಯನ್ನು ಸ್ವೀಕರಿಸಬಹುದು.
•ಕಣಜ, ಕಣಜಕ್ಕೆ ಸುತ್ತುವ ಹಗ್ಗ (ಪೆರ್ಮರಿ) ಇವು ಗಣಪನ ಹೊಟ್ಟೆ ಮತ್ತು ಸರ್ಪವನ್ನು ಸಾಂಕೇತಿಸುತ್ತವೆ. ಭತ್ತಕ್ಕೆ ಇಲಿಕಾಟ ಸಹಜ. ರಕ್ಷಣೆಗೆ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು. ಹೇಗಿದೆ ಜನಪದರ ಕಲ್ಪನೆ?
(ಸಂಗ್ರಹ)
ಬರಹ : ಕೆ.ಎಲ್.ಕುಂಡಂತಾಯ