ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆ ಕುರಿತು ಮಾಹಿತಿ ಕಾರ್ಯಾಗಾರ
Posted On:
08-05-2022 05:46PM
ಕಾಪು : ಕರ್ನಾಟಕ ಹಾಲು ಮಹಾ ಮಂಡಲ ಬೆಂಗಳೂರು, ದ.ಕ. ಹಾಲು ಒಕ್ಕೂಟ ಮಂಗಳೂರು, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಮಡುಂಬು ಶೇಖರ್ ಬಂಗೇರ ಅವರ ಮನೆ ವಠಾರದಲ್ಲಿ ಮೇ 4ರಂದು ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಉದ್ಘಾಟಿಸಿದರು.
ಕೆಚ್ಚಲು ಬಾವು ರೋಗ ಕರಾವಳಿಯ ಹೈನುಗಾರಿಕೆಗೆ ಮಾರಕ ಪರಿಣಾಮ ಬೀರುತ್ತಿದೆ. ಈ ರೋಗಕ್ಕೆ ಗುರಿಯಾಗುವ ರಾಸುಗಳ ಹಾಲನ್ನು ಡೈರಿಗೆ ಪೂರೈಸಲು ಅವಕಾಶವಿಲ್ಲದೆ ಇದ್ದು, ಅದನ್ನು ನೀಡಿದರೆ ಕೆಎಂ ಪತ್ತೆ ಹಚ್ಚಿ ಡಿಪೋದ ಹಾಲನ್ನೇ ತಿರಸ್ಕರಿಸುವ ತಂತ್ರಜ್ಞಾನ ಕೆಎಂಎಫ್ ಡೈರಿಯಲ್ಲಿದೆ. ಹೈನುಗಾರರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಇಸ್ರೇಲ್ ಮಾದರಿಯಲ್ಲಿ ಚುಚ್ಚು ಮದ್ದು ಇಲ್ಲದೇ ಕೆಚ್ಚಲು ಬಾವು ರೋಗ ನಿಯಂತ್ರಿಸಲು ರೈತರಿಗೆ ಪ್ರಾಯೋಗಿಕ ನೆಲೆಯಲ್ಲಿ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಹಾಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಡಾ ರವಿರಾಜ ಹೆಗ್ಡೆ ಕೊಡವೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಔಷಧ ರಹಿತವಾಗಿ ಕೆಚ್ಚಲು ಬಾವು ರೋಗದ ಉಪಶಮನಕ್ಕೆ ಕೆಎಂಎಫ್ ಮುಂದಾಗಿದೆ. ಇದರಿಂದಾಗಿ ರಾಸುಗಳ ಆರೋಗ್ಯ ಕಾಪಾಡಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ತಾಂತ್ರಿಕ ಮಾರ್ಗದರ್ಶಕ ರಘೋತ್ತಮ್ ಅವರು ಔಷಧ ರಹಿತ ಕೆಚ್ಚಲು ಬಾವು ಗುಣಪಡಿಸುವಿಕೆಯ ಸಮಗ್ರ ಮಾಹಿತಿ ನೀಡಿದರು. ಶಾಂತಾರಾಮ ಶೆಟ್ಟಿ, ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ| ಅನಿಲ್ ಕುಮಾರ್ ಶೆಟ್ಟಿ, ಡಾ| ಟಿ. ವಿ. ಶ್ರೀನಿವಾಸ್, ಡಾ| ಮಹೇಶ್ವರಪ್ಪ, ವೈದ್ಯ ಡಾ| ಧನಂಜಯ್, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಉಪಸ್ಥಿತರಿದ್ದರು.
ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಯಶವಂತ್ ನಿರೂಪಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ವಂದಿಸಿದರು.