ಸೆ.30 : ಸೌಹಾರ್ದತೆ ಮೆರೆಯುವ ಕಾಪು ಪಿಲಿಪರ್ಬ ಸೀಸನ್ -3
Posted On:
27-09-2025 11:59AM
ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರ ಮಾರ್ಗದರ್ಶನದಲ್ಲಿ ಸೆ.30, ಮಂಗಳವಾರ "ಕಾಪು ಪಿಲಿ ಪರ್ಬ ಸೀಸನ್-3" ಕಾರ್ಯಕ್ರಮವು ಕಾಪು ಹೊಸ ಮಾರಿಗುಡಿ ದೇವಸ್ಥಾನ ಆವರಣದಲ್ಲಿ ಸಂಜೆ 4 ಗಂಟೆಗೆ ಜರಗಲಿದೆ ಎಂದು ರಕ್ಷಣಾಪುರ ಜವನೆರ್ ಕಾಪು ಇದರ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ ಹೇಳಿದರು.
ಅವರು ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ವಧರ್ಮದ ಗುರುಗಳ ಉಪಸ್ಥಿತಿಯಲ್ಲಿ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮನೋಹರ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ.
ಉಭಯ ಜಿಲ್ಲೆಗಳ ಮುಖಂಡರುಗಳು, ರಾಜ್ಯಮಟ್ಟದ ಪ್ರಮುಖರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರತಿಷ್ಟಿತ ವಯೋಲಿನ್, ಚಂಡೆ ವಾದನ ಮತ್ತು ವಿವಿಧ ನೃತ್ಯ ಕಾರ್ಯಕ್ರಮ ನಡೆಯಲಿದೆ.
ವಿವಿಧ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ 9 ಜನ ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಮುಖ 10 ತಂಡಗಳು ಭಾಗವಹಿಸುತ್ತಿದ್ದು ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮದ ಹುಲಿವೇಷದಾರಿಗಳ ಅಬ್ಬರ ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ ರೂ.1 ಲಕ್ಷ 50 ಸಾವಿರ, ದ್ವಿತೀಯ ರೂ.1ಲಕ್ಷ, ತೃತೀಯ ರೂ. 50 ಸಾವಿರ ನಗದು ಬಹುಮಾನ ನೀಡಲಾಗುವುದು.
ಅಲ್ಲದೆ ವಿಶೇಷ ಕರಿಹುಲಿ, ಅಕ್ಕಿ ಮುಡಿಹಾರಿಸುವುದಕ್ಕೆ, ಅತ್ಯುತ್ತಮ ಹುಲಿ ಕುಣಿತಗಾರ, ವಿಶೇಷ ಮರಿಹುಲಿ, ಅತ್ಯುತ್ತಮ ತಾಸೆ, ವಿಶೇಷ ನಗದು ಬಹುಮಾನ ನೀಡಲಾಗುವುದು ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಪು ಪಿಲಿ ಪರ್ಬವು ಉಡುಪಿ ಜಿಲ್ಲೆಯಲ್ಲಿ ನಡೆಯುವ ಸ್ಪರ್ಧಾತ್ಮಕ ಕಾರ್ಯಕ್ರಮ.
ಸಂಸ್ಕತಿ ಉಳಿವಿನ ಜೊತೆಗೆ ಯುವ ಜನರಿಗೆ ಕಲೆಯಲ್ಲಿ ಆಸಕ್ತಿ ವಹಿಸಲು ಪೂರಕವಾಗಿದೆ. ಸರ್ವ ಜನರೂ ಭಾಗವಹಿಸುವ ಜೊತೆಗೆ ಕಾಪುವಿನ ಪ್ರತಿಷ್ಠಿತ ಕಾರ್ಯಕ್ರಮವಾಗಿ ರೂಪಿಸುವುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಶಾಂತಲತಾ ಶೆಟ್ಟಿ, ಜಿತೇಂದ್ರ ಫುಟಾರ್ಡೋ, ಶರ್ಫುದ್ದೀನ್, ನಿಯಾಝ್ ಅಹಮ್ಮದ್, ಗಣೇಶ್ ಕೋಟ್ಯಾನ್, ವೈ ಸುಕುಮಾರ್ ಉಪಸ್ಥಿತರಿದ್ದರು.