ಮೇ 24 : ಪತ್ತನಾಜೆ - ಆಟ, ಕೋಲ, ಬಲಿ, ಅಂಕ, ಆಯನಗಳಿಗೆ 'ವಿರಾಮ'
Posted On:
23-05-2022 08:46PM
'ಪತ್ತನಾಜೆ' ಎಂದರೆ ಆಟ. ಕೋಲ, ಬಲಿ,
ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳು ಇಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ .
ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .ವೃಷಭ ಎಂದರೆ ಬೇಶ .ಹತ್ತನೇ ದಿನವನ್ನು ತಿಂಗಳು ಸಾಗುವ ಹತ್ತನೇ ಹೆಜ್ಜೆ (ಅಜೆ)ಎಂದು ಗ್ರಹಿಸಿ 'ಪತ್ತನಾಜೆ"ಎಂದಿರ ಬಹುದು.
'ಬೇಶ' ತಿಂಗಳು ತನ್ನ ವಿಶೇಷಗಳಿಂದ , ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು . 'ಬೇಶದ ತನು - ಬೇಶದ ತಂಬಿಲ' ತುಳುವರಿಗೆ ಆಚರಣೆಗಳ ಪರ್ವಕಾಲ .'ಬೆನ್ನಿ'
ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ' ; "ತನು ಮಯಿಪಾದ್ ತಂಬಿಲಕಟ್ಟಾದ್" , ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ , ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ - ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ - ಸ್ವಂತ ವಾಹನ ಸೌಲಭ್ಯಗಳಿವೆ .
ಬದಲಾಗುತ್ತಿರುವ ಕಾಲ - ಸಂದರ್ಭ - ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕುಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವನ ಚರ್ಯೆಗೆ ಅಥವಾ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು . ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ . ಆ ದಿನ ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ .
ಮಕರ - ಪುಯಿಂತೆಲ್ ತಿಂಗಳ
ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು .ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು .ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ . ಪುಯಿಂತೆಲ್ - ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ , ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ.
'ಮಾಯಿ - ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ - ಮೀನ' ತಿಂಗಳು . ಬೆಳೆದ ಗೆಣಸು ಮುಂತಾದುಗಳನ್ನು ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ" . ಹೀಗೊಂದು ಒಡಂಬಡಿಕೆ . ಮುಂದೆ ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು ಮುಗಿದು ಪಗ್ಗು ತಿಂಗಳ 'ಮೊದಲ ದಿನ - ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ - ವಿಷು ಆಚರಿಸುತ್ತಾನೆ .ಇಗಾದಿ ಆಚರಣೆ ಸರಳವಾದುದು ,ಚೌತಿ , ದೀಪಾವಳಿಗಳಂತೆ ಸಂಭ್ರಮಗಳಿಲ್ಲ .ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನು - ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ . ಮುಂದೆ 'ಪಗ್ಗು ತಿಂಗಳ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮ. ಈ ನಡುವೆ 'ಕಜೆಬಿದೆ ಆವ - ಮಡಿಬಿದೆ ಆವ' ಎಂಬ ನಿಷ್ಕರ್ಷೆಗೆ ಅನುಗುಣವಾಗಿ ನೇಜಿ ಹಾಕುವ ಪದ್ಧತಿಯೂ ಒಂದಿದೆ.
ಕೃತ್ತಿಕಾ ಮಳೆಯ ಕಾಲ ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು - ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು - ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ ( ತೂಟಾನ್ - ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ , ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ .
ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ .
ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು .ಇದು ಮಣ್ಣಿನ ಪರಿಮಳ ,ಇದೇ ಕಾರಣವಾಗಿ ಬೆನ್ನಿ - ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ . ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ ...ಅದು ಅಷ್ಟು ಸುವಾಸನೆಯುಳ್ಳದ್ದಾ ...ಎಂದು ಕೇಳುವವರಿದ್ದಾರೆ . ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ .ಆಗ ಅದೇ ಸುಗಂಧವಾಗಿತ್ತು , ಏಕೆಂದರೆ ಭೂಮಿ ತಾಯಿಯಾಗಿದ್ದಳು .ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ. ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ.
ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ ,ಬೇಸಾಯ , ನಮ್ಮ - ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ ' ಪತ್ತನಾಜೆ
ಪರ್ವಕಾಲ ,ಸುಸಂದರ್ಭ . ಇನ್ನು ನಮಗೆ "ಬೆನ್ನಿದ ಮಗೆ" - ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ . ಬಳಿಕ ಅಷ್ಟಮಿ ,ಚೌತಿ ಆಚರಣೆಗಳಲ್ಲಿ .ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ , ನವರಾತ್ರಿಯ ವೇಳೆ .ಆದರೆ ನಗುಮೊಗದಿಂದ ಬೇಸಾಯಗಾರನ ಮುಖಾಮುಖಿಯಾಗುವುದು
ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ ,ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ .ಆತ ಸಂತೃಪ್ತನಾಗಿರುತ್ತಾನೆ
"ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ"
ಪತ್ತನಾಜೆ ಎಂದು ಆರಂಭಿಸಿ ದೀಪಾವಳಿ ವರಗೆ ಹೋಗ ಬೇಕಾಯಿತು . "ಭೂಮಿ -ಕೃಷಿ' ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ .ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ ,ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ , ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ .
ಲೇಖನ : ಕೆ.ಎಲ್ .ಕುಂಡಂತಾಯ.