ಹಿರಿಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ಗುರುಕಾಣಿಕೆ ನೀಡಿದಂತೆ : ಮಹೇಶ್ ಶೆಟ್ಟಿ
Posted On:
23-05-2022 11:34PM
ಬಂಟಕಲ್ಲು : ವಿವಿಧ ರಂಗದಲ್ಲಿ ಸಾಧನೆಯನ್ನು ಮಾಡಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ವ್ಯಕ್ತಿ ಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದು ಸಮಾಜ ಅವರಿಗೆ ಗುರುಕಾಣಿಕೆ ನೀಡಿದಂತೆ ಎಂದು 92ನೇ ಹೇರೂರು ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗದ 2ನೇ ವರ್ಷದ ಸಾರ್ವಜನಿಕ ಕ್ರಿಡೋಸವದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಭವಾನಿ ಫಾರ್ಮ್ನ ಮಾಲಕರಾದ ಶ್ರೀ ಮಹೇಶ್ ಶೆಟ್ಟಿ ಹಿರಿಯರಾದ ವಿಠ್ಠಲ್ ಶೆಟ್ಟಿ, ದೇವದಾಸ ಜೋಗಿ, ದೇವರಾಜ ಆಚಾರ್ಯ, ಕೂಸ ಎಸ್. ಪೂಜಾರಿ ಕಲ್ಲುಗುಡ್ಡೆ ಇವರನ್ನು ಸನ್ಮಾನಿಸಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಪ್ರತಿಭೆ ಸ್ಟ್ರಿಂಗ್ ಆರ್ಟ್ಸ್ ಮೂಲಕ 37.5×38 ಇಂಚಿನ ವಿಶ್ವಕರ್ಮ ಕಲಾಕೃತಿಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡ ಕುಮಾರಿ ಪ್ರಿಯಾಂಕಾ ಆಚಾರ್ಯ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎವಿಲಿನ್ ಲೋಬೊ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಧೀರಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಾರ್ವಜನಿಕ ರಂಗದಲ್ಲಿ ಸಂಸ್ಥೆಯ ಸೇವಾ ಚಟುವಟಿಕೆಯನ್ನು ಸ್ವಾಗತಿಸಿದರು. ಬೆಳಿಗ್ಗೆ ನಡೆದ ಅರೋಗ್ಯವಂತ ಶಿಶು ಕಾರ್ಯಕ್ರಮವನ್ನು ರವಿ ಪುರೋಹಿತ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ SSLC ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿವೇತನ ನೀಡಲಾಯಿತು. ಸಮಿತಿಯ ಉಪಾಧ್ಯಕ್ಷ ಗಣಪತಿ ಬಿ. ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನೋದ ಜೆ. ಆಚಾರ್ಯ ಕ್ರೀಡಾಕೂಟ ನಡೆಸಿದರು. ವಿಶಾಲ ಜಿ. ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿದರು.
ಕುಮಾರಿ ತನುಷಾ ಪ್ರಾರ್ಥಿಸಿದರು. ಅಧ್ಯಕ್ಷ ಮಾಧವ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಬಳಗದ ಕಾರ್ಯದರ್ಶಿ ಮಂಜುಳಾ ಗಣೇಶ್ ವಂದಿಸಿದರು.