ದೈವ ಕಾರ್ಣಿಕ ; ಮದುವೆ ಮನೆಯಲ್ಲಿ ಕಳೆದುಕೊಂಡ ಸರ ದೈವಸ್ಥಾನದೆದುರು ಪತ್ತೆ
Posted On:
28-05-2022 04:31PM
ಕಾಪು : ಕಳೆದುಕೊಂಡ ಚಿನ್ನದ ಸರ ದೈವ ಪ್ರಾರ್ಥನೆಯ ಬಳಿಕ ಮರಳಿ ಸಿಗುವ ಮೂಲಕ ತುಳುನಾಡಿನ ದೈವ ಶಕ್ತಿಯ ಮಹಿಮೆಗೆ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯನ ಸಾನಿಧ್ಯ ಸಾಕ್ಷಿಯಾಗಿದೆ.
ಆರು ವರ್ಷಗಳ ಹಿಂದೆ ಸಮಗ್ರ ಜೀರ್ಣೋದ್ದಾರಗೊಂಡು ಹಲವಾರು ಪವಾಡಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ರೈಲ್ವೈ ನಿಲ್ದಾಣದ ಬಳಿ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವಿದೆ.
ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಕಾಣೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಮೇ 27ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಉರಿಯುತ್ತಿರುವ ಸಾಣಾದಿಗೆಗೆ ಸುತ್ತಿಕೊಂಡಂತೆ ಪತ್ತೆಯಾಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಮೇ23ರಂದು ಕ್ಷೇತ್ರದಲ್ಲಿ ನಡೆದ ಹೋಮ ಪಂಚಕಜ್ಜಾಯ ಸೇವೆಯ ದಿವಸ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಲಾಗಿತ್ತು. ಚಿನ್ನದ ಸರವು ಸಿಕ್ಕಿದರೆ ಧರ್ಮ ಜಾರಂದಾಯ ಬಂಟ ಪರಿವಾರ ಶಕ್ತಿಗಳಿಗೆ ಹೋಮ ಪಂಚಕಜ್ಜಾಯ ಸೇವೆ ನೀಡುವುದೆಂದು ತೀರ್ಮಾನಿಸಲಾಗಿತ್ತು.
ಇದರಿಂದ ಕುಟುಂಬ ವರ್ಗ ಮತ್ತು ದೈವಸ್ಥಾನದ ಭಕ್ತ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.