ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಐತಿಹಾಸಿಕ ಮಹತ್ವದ ಕಾಪು ಮಲ್ಲಾರು ಕೋಟೆಯಲ್ಲಿದ್ದ ಮಾರಿಯಮ್ಮನ ಮೂಲನೆಲೆ ನಿನ್ನಿಕೆರೆ ರಕ್ಷಣೆಗೆ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಆಗ್ರಹ

Posted On: 31-05-2022 02:20PM

ಕಾಪು : ಇತಿಹಾಸ ಪ್ರಜ್ಞೆಯ ಕೊರತೆಯ ಕಾರಣದಿಂದ, ಐತಿಹಾಸಿಕ ಮಹತ್ವದ ಸ್ಥಳಗಳನ್ನು ಉಳಿಸುವಲ್ಲಿ ಸರಕಾರ, ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನಿರಂತರವಾಗಿ ವಿಫಲವಾಗುತ್ತಾ ಬಂದಿವೆ. ಬುದ್ಧಿವಂತರ ಜಿಲ್ಲೆಗಳಾದ ಕರಾವಳಿ ಕರ್ನಾಟಕವೂ ಐತಿಹಾಸಿಕ ಮಹತ್ವದ ಸ್ಥಳಗಳನ್ನು, ಸ್ಮಾರಕಗಳನ್ನು ಉಳಿಸುವಲ್ಲಿ ಆಸಕ್ತಿ, ಕಾಳಜಿ, ಇಚ್ಛಾಶಕ್ತಿ ತೋರಿಸದಿರುವುದು ನಿಜಕ್ಕೂ ವಿಷಾದನೀಯ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಲ್ಲಾರು ಕೋಟೆ ಇದ್ದ ಸ್ಥಳದಲ್ಲಿ ಪ್ರಸ್ತುತ ಕೋಟೆ ನಾಶವಾಗಿ ಹೋಗಿದ್ದರೂ, ಕೋಟೆ ಇದ್ದ ಸ್ಥಳದಲ್ಲಿ ನಿನ್ನೆಯವರೆಗೂ ಇದ್ದ ಅಳಿದುಳಿದ ಅವಶೇಷಗಳಲ್ಲಿ ಒಂದಾದ ನಿನ್ನಿಕೆರೆ ಇಂದು ಇಲ್ಲವಾಗುತ್ತಿರುವುದು. ಅಂದರೆ, ನಿನ್ನಿಕೆರೆಯನ್ನು ಮುಚ್ಚಲಾಗುತ್ತಿದೆಯಲ್ಲ ಎಂದು ಬೇಸರವಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಹೇಳಿದರು.

ಕಾಪುವಿನ ಪ್ರಸಿದ್ಧ ಮಾರಿಯಮ್ಮ ದೇವಿಯ ಮೂಲ ನೆಲೆ ಇದೇ ನಿನ್ನಿಕೆರೆ. ಕಾಪು ಮಾರಿಯಮ್ಮ ಮೊತ್ತಮೊದಲು ತನ್ನ ಇರವನ್ನು ತೋರಿಸಿಕೊಟ್ಟಿದ್ದು ಇದೇ ನಿನ್ನಿಕೆರೆಯಿಂದ. ಇದು ಈಗಾಗಲೇ ದಾಖಲಾದ ವಿಷಯಗಳಲ್ಲಿ ಒಂದು. ಕಳೆದ ವರ್ಷ ಈ ಐತಿಹಾಸಿಕ ಮಹತ್ವದ ನಿನ್ನಿಕೆರೆ, ಗಿಡಗಂಟಿಗಳಿಂದ ಸುತ್ತುವರಿಯಲ್ಪಟ್ಟಿತ್ತು. ಆದರೆ, ನಿನ್ನಿಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಪು ಗ್ರಾಮ ಪಂಚಾಯತ್ ಆಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲೀ, ಸಂಘ ಸಂಸ್ಥೆಗಳಾಗಲೀ ಯಾವುದೇ ಒಂದು ಹೆಜ್ಜೆಯನ್ನು ಇರಿಸದೆ ನಿರ್ಲಕ್ಷಿಸಿದ್ದರು. ಈ ನಿರ್ಲಕ್ಷ್ಯದ ಕಾರಣ, ಇದೀಗ ನಿನ್ನಿಕೆರೆ ಮುಚ್ಚಿಹೋಗಿದೆ. ಅಂದರೆ, ಸ್ಥಳೀಯರು ಐತಿಹಾಸಿಕ ಮಹತ್ವದ ನಿನ್ನಿಕೆರೆಯನ್ನು ಮುಚ್ಚಿ ನಾಶಪಡಿಸಲಾಗುತ್ತಿದೆಯೇ ? ಮಲ್ಲಾರುವಿನಲ್ಲಿದ್ದುದು ಅಂತಿಂಥ ಕೋಟೆಯೇನೂ ಅಲ್ಲ. ಅತ್ಯಂತ ಮಹತ್ವದ ಐತಿಹಾಸಿಕ ಕೋಟೆಯಾಗಿತ್ತು ಮಲ್ಲಾರಿನ ಕೋಟೆ ಮತ್ತು ಕೆರೆ ಹಾಗೂ ಇಲ್ಲಿದ್ದ ಕೆಲವು ಐತಿಹಾಸಿಕ ವಸ್ತುಗಳು. ಇವುಗಳ ಪೈಕಿ ಕೆರೆಯೊಂದು ನಾಶದ ಅಂಚಿನಲ್ಲಿದ್ದರೆ, ಉಳಿದವುಗಳು ಈಗಾಗಲೇ ಸಂಪೂರ್ಣ ನಾಶವಾಗಿವೆ.

ಮಲ್ಲಾರುವಿನ ಕೋಟೆ ಬರೋಬ್ಬರಿ ಹದಿನಾರು ಎಕರೆಗೂ ಅಧಿಕ ಸ್ಥಳದಲ್ಲಿ ವ್ಯಾಪಿಸಿತ್ತು. ಆದರೆ, ಇಂದು ಈ ಕೋಟೆಗೆ ಸಂಬಂಧಿಸಿದ ಒಂದೇ ಒಂದು ಕಲ್ಲು ಸಹ ನಮಗೆ ನೋಡಲು ಸಿಗುವುದಿಲ್ಲ. ಕೊಟೆಯೊಳಗಡೆ ಇದ್ದ ದಿಬ್ಬಗಳನ್ನು ನೆಲಸಮಗೊಳಿಸಲಾಗಿದೆ. ಮಾತ್ರವಲ್ಲ, ಇಲ್ಲಿದ್ದ ಕೆಲವೊಂದು ಐತಿಹಾಸಿಕ ವಸ್ತುಗಳನ್ನು ಕೂಡಾ ನಾಶಗೊಳಿಸಲಾಗಿದೆ. ಮಲ್ಲಾರಿನ ಕೋಟೆ, ವಿಜಯನಗರ ರಾಜರ ಆಡಳಿತ ಕಾಲದ್ದು ಎನ್ನುವುದೇ ಸಾಕು, ಈ ಕೋಟೆಯ ಮಹತ್ವವನ್ನು ಸಾರಿ ಹೇಳಲು. ಶಾಲಿವಾಹನ ಶಕ 1665ನೇ ರುಧಿರೋದ್ಗಾರಿ ಸಂವತ್ಸರದಲ್ಲಿ ಕಾಪು ಮರ್ದ ಹೆಗ್ಗಡೆ ಮಲ್ಲಾರಿನ ಕೋಟೆಯನ್ನು ಪುನರ್ನಿರ್ಮಿಸಿದ ಬಗ್ಗೆ ಮತ್ತು ಕಾಪು ಕಡಲ ಕಿನಾರೆಯಲ್ಲಿರುವ ಬೃಹತ್ ಬಂಡೆಯ ಮೇಲೆ ಕೋಟೆ ಇನ್ನೊಂದು ಕೋಟೆ (ಮನೋಹರಗಡ) ಕಟ್ಟಿಸಿದ ಬಗ್ಗೆ ಖ್ಯಾತ ಇತಿಹಾಸಕಾರರಾದ ಎಂ. ಗಣಪತಿ ರಾವ್ ಐಗಳ್ ಅವರ "ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ" ಗ್ರಂಥದಲ್ಲಿ ಉಲ್ಲೇಖವಿದೆ. 1740ರ ದಶಕದ ಅವಧಿಯಲ್ಲಿ ಕೆಳದಿ ಸಂಸ್ಥಾನದ ಅಧೀನಕ್ಕೆ ಒಳಪಟ್ಟ ಬಳಿಕ, ಈ ಕೋಟೆ ಬಸಪ್ಪ ನಾಯಕನ ಆಡಳಿತದಲ್ಲಿದ್ದರೆ, ಆನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತ್ತು ಈ ಐತಿಹಾಸಿಕ ಮಲ್ಲಾರಿನ ಕೋಟೆ.

ನಾಲ್ಕೈದು ದಶಕದ ಹಿಂದಿನವರೆಗೂ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ಇಲ್ಕಿಗೆ ಕರೆದುಕೊಂಡು ಬಂದು ಈ ಕೋಟೆಯನ್ನು ತೋರಿಸುತ್ತಿದ್ದರು ಎಂಬ ವಿಷಯವನ್ನು ಗ್ರಾಮದ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ. ಟಿಪ್ಪು ಮರಣಾನಂತರ ಸಹಜವಾಗಿಯೇ ಕೋಟೆ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. ಟಿಪ್ಪು ಆಡಳಿತ ಕಾಲದಲ್ಲಿ ಕೊಟೆಯಲ್ಲಿದ್ದ ಐತಿಹಾಸಿಕ ಮಹತ್ವದ ಖಡ್ಗವೊಂದು ಇಂದಿಗೂ ಉಳಿದಿದ್ದು, ಇದು, ಮಲ್ಲಾರು ಕೋಟೆ ಬಳಿಯ "ಕಾಪು ಶ್ರೀ ಮಾರಿಯಮ್ಮ ದೇವಿಯ (ಶ್ರೀ ತ್ರಿಶಕ್ತಿ ಸನ್ನಿಧಿ) ಆದಿಸ್ಥಳದ ಮನೆಯಲ್ಲಿ "ಕೋಟೆ ಮಾರಿ" ಯೊಂದಿಗೆ ಗುಡಿಯಲ್ಲಿದೆ. "ಕೋಟೆ ಮಾರಿ" ನೆಲೆಯಾಗಿರುವ ಮೂಲ ಮನೆಯ ಗುಡಿಯೊಳಗೆ ಖಡ್ಗವೂ ಇದ್ದು, ಇದಕ್ಕೆ ವಾರ್ಷಿಕ ಆಯುಧ ಪೂಜೆಯ ದಿನದಂದು ಪೂಜೆಯನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಕೋಟೆ ಮಾರಿ ಮತ್ತು ಟಿಪ್ಪು ಕಾಲದ ಖಡ್ಗ ಹೊರತುಪಡಿಸಿದರೆ ಉಳಿದಿರುವ ಇನ್ನೊಂದು ಐತಿಹಾಸಿಕ ಸ್ಮಾರಕವೆಂದರೆ, ಅದು ನಂದಿಕೆರೆ ಅಥವಾ ನಿನ್ನಿಕೆರೆ. ಈ ಕೆರೆಯನ್ನು ಪ್ರಸ್ತುತ ಪೂರ್ಣವಾಗಿ ಗಿಡಗಂಟಿ ಆವರಿಸಿರುವುದರಿಂದ, ಇಲ್ಲೊಂದು ಕೆರೆ ಇದೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಕೆರೆಯನ್ನು ಈಗ ನೇರವಾಗಿ ನೋಡಲು ಸಾಧ್ಯವಿಲ್ಲವಾದರೂ ಕೆರೆ ಇದೆ, ಉಳಿದಿದೆ. ಮಲ್ಲಾರು ಕೋಟೆಯ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕವಾದ ಕೆರೆ ಹೀಗೆ ಇಷ್ಟಾದರೂ ಉಳಿದಿರುವುದು ಒಂದಷ್ಟು ಸಮಾಧಾನಕರ ವಿಷಯವೇ ಆಗಿದೆ. ಕಾಪು ಪುರಸಭೆ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಇನ್ನಾದರೂ ಈ ನಂದಿಕೆರೆ (ನಿನ್ನಿಕೆರೆ) ಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕವೋ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕವೋ, ಏನಾದರೂ ಮಾಡಿ ಈ ಕೆರೆಯನ್ನು ಉಳಿಸುವ ಮಹತ್ಕಾರ್ಯವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದರು.