ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಆಕ್ಷೇಪಣೆ ಹಿಂಪಡೆದ ಕುಟುಂಬ
Posted On:
04-06-2022 06:53PM
ಪಡುಬಿದ್ರಿ : ಕಂಚಿನಡ್ಕ ಮಿಂಚಿನ ಬಾವಿಯ ಶ್ರೀ ಕೋರ್ದಬ್ಬು ದೈವಸ್ಥಾನದ ಮೇಲ್ಛಾವಣಿ ಬಗ್ಗೆ ಸಾನಿಧ್ಯದ ಬಳಿಯ ಎರಡು ಮುಸ್ಲಿಂ ಕುಟುಂಬಗಳು ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆದಿದೆ.
ಪಂಚಾಯತ್ ರಸ್ತೆಯಾದ್ದರಿಂದ ಗ್ರಾಮಪಂಚಾಯತ್ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ. ದೈವಸ್ಥಾನದ ಮುಂಭಾಗದ ಈ ರಸ್ತೆಯಲ್ಲಿ ಎಲ್ಲಾ ಸಮುದಾಯದ ಜನರು ಹೋಗುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಆಕ್ಷೇಪಣೆ ಹಿಂಪಡೆದ ಮಹಿಳೆಯೋರ್ವರು ಮಾತನಾಡಿ ದೈವಸ್ಥಾನಕ್ಕೆ ಮೇಲ್ಛಾವಣಿ ಹಾಕುವ ಬಗ್ಗೆ ಆಕ್ಷೇಪ ಮುಂಚಿನಿಂದಲೂ ಇರಲಿಲ್ಲ. ನಾವು ರಸ್ತೆಗೆ ಹಾಕಬೇಡಿ ಎಂದು ಹೇಳುವುದು. 2004 ರಿಂದಲೂ ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ನಾವು ತೊಂದರೆ ಮಾಡಿಲ್ಲ. ನಮ್ಮಿಂದಾಗಿ ಯಾವುದೇ ಗಲಾಟೆಯಾಗಬಾರದೆಂದು ನಾವು ಆಕ್ಷೇಪಣೆ ಹಿಂಪಡೆದಿದ್ದೇವೆ. ಯಾವುದೇ ರೀತಿಯ ಹೆದರಿಕೆಯ ವಾತಾವರಣ ಆಗಬಾರದು. ಕಾನೂನು ಎಲ್ಲರಿಗೂ ಒಂದೇ. ದಿನನಿತ್ಯ ಓಡಾಡುವ ರಸ್ತೆ ಇದಾಗಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ತಗಡಿನಿಂದ ತೊಂದರೆಯಾಗಬಾರದು. ಪಡುಬಿದ್ರಿ ಠಾಣೆಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಗೊಂದಲವಾಗಿದೆ ಎಂದು ಸೃಷ್ಟಿಸಲಾಗಿದೆ ಎಂದರು.
ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಮಾತನಾಡಿ ನಾವೆಲ್ಲರೂ ಸಹಬಾಳ್ವೆ, ಅನ್ಯೋನ್ಯತೆಯಿಂದ ಬಾಳಬೇಕಾಗಿದೆ. ಕಾನೂನಾತ್ಮಕವಾಗಿ ಪಂಚಾಯತ್ ಇದನ್ನು ಪರಿಶೀಲಿಸಲಿದೆ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ನಿಂದ ಯಾವುದೇ ಪರವಾನಗಿ ನೀಡಲಾಗದು. ಧಾರ್ಮಿಕ ಕೇಂದ್ರವಾದ್ದರಿಂದ ಪರಸ್ಪರ ಸಹಮತದಿಂದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆಕ್ಷೇಪಣೆ ಹಿಂಪಡೆದ ಕುಟುಂಬ ವರ್ಗ, ಸ್ಥಳೀಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.