ಕಾಪು : ಕೇಂಜ ಗರಡಿಯಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಪೂ ಪೂಜನಾ ಕಾರ್ಯ ನೆರವೇರಿಸುತ್ತಿದ್ದ ಸುರನಾಥ ಪೂಜಾರಿ (ಬಾಬಣ್ಣ)ಯವರು ಮೇ 31ರಂದು ಅಸೌಖ್ಯದಿಂದ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿಕೋರುವ ನಿಟ್ಟಿನಲ್ಲಿ ಜೂನ್ 5ರಂದು ಕೇಂಜ ಗರಡಿ ವಠಾರದಲ್ಲಿ ನುಡಿನಮನ ಕಾರ್ಯವು ಜರಗಿತು.
ಮುಲ್ಕಿ ತೋಕೂರು ತಪೋವನ ಎಂ.ಆರ್ ಪೂಂಜ ತಾಂತ್ರಿಕ ವಿದ್ಯಾಲಯ ಪ್ರಾಂಶುಪಾಲರಾದ ಹರಿ ಎಚ್ ಪಿಲಾರು, ಮುದರಂಗಡಿ ತಮ್ಮ ನುಡಿನಮನದಲ್ಲಿ ಕೇಂಜದ ಗ್ರಾಮವು ಹೂವಿನ ತೋಟದಂತೆ ಇಲ್ಲಿನ ಜನರು ಮೃದು ಸ್ವಭಾವದವರು. ಅದರಲ್ಲಿ ಓರ್ವರಾದ ಬಾಬಣ್ಣನವರನ್ನು ಹತ್ತಿರದಿಂದ ಬಲ್ಲವನಾಗಿದ್ದು ಎಲ್ಲರೊಂದಿಗೆ ಆತ್ಮೀಯನಾಗಿದ್ದು ಜಾತಿ ಮತ ಬೇಧವೆನ್ನದೆ ಸರಳ ಸಜ್ಜನಿಕೆಯಿಂದ ಉತ್ತಮ ಸಂಸ್ಕಾರಯುತ ಬಾಳನ್ನು ನಡೆಸಿ ಗೌರವದಿಂದಲೂ, ಪ್ರೀತಿ ವಾತ್ಸಲ್ಯದಿಂದಲೂ ಬೆರೆತು ನಿಷ್ಠೆಯಿಂದ ಬೈದೇರುಗಳ ಸೇವೆ ಸಲ್ಲಿಸುತ್ತಿದ್ದ ಇವರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರು.
ಈ ಸಂದರ್ಭ ಇರಂದಾಡಿ ಅರಸರ ಮನೆಯ ಜಗದೀಶ್ ಅರಸ, ಅರುಣ್ ಕುಮಾರ್ ಶೆಟ್ಟಿ ಪಡು ಇರಂದಾಡಿ, ರಾಘು ಶೆಟ್ಟಿ ಪಣಿಯೂರು ಗುತ್ತು, ಶಂಕರ ಶೆಟ್ಟಿ ಬರ್ಪಾಣಿ, ಪವನ್ ಶೆಟ್ಟಿ ನಡುಗುತ್ತು, ಕುತ್ಯಾರು ನವೀನ್ ಶೆಟ್ಟಿ, ಕೃಷ್ಣ ಪೂಜಾರಿ ಕೇಂಜ, ಸುಧಾಕರ ಪೂಜಾರಿ, ಸಾಯಿನಾಥ್ ಶೆಟ್ಟಿ, ಸಂಪತ್ ಕುಮಾರ್, ದೇವರಾಜು ಬಿ ಶೆಟ್ಟಿ, ಪ್ರವೀಣ್ ಭಂಡಾರಿ, ರಾಜೇಶ್ ಶೆಟ್ಟಿ, ಸತೀಶ್ ಪಾತ್ರಿ, ಮೃತರ ಕುಟುಂಬಸ್ಥರು, ಮತ್ತಿತರರು ಉಪಸ್ಥಿತರಿದ್ದರು.
ಕೇಂಜ ಗರಡಿಯ ಭಂಡಾರದ ವತಿಯಿಂದ ಮೃತರ ಪುತ್ರಿಯ ಉನ್ನತ ವಿದ್ಯಾಭ್ಯಾಸದ ಖರ್ಚು ಭರಿಸುವ ಬಗ್ಗೆ ಹಾಗೂ ಕುಟುಂಬ ನಿರ್ವಹಣೆಗೆ ಹತ್ತು ಸಮಸ್ತರ ಕ್ರೋಢೀಕರಣದಿಂದ ಸಹಾಯ ನೀಡುವುದೆಂದು ನಿರ್ಣಯಿಸಲಾಯಿತು.
ಕೇಂಜ ಬಗ್ಗ ತೋಟ ಬಗ್ಗ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಾಗಂದಡಿ ಕಿರಣ್ ಆಳ್ವ ವಂದಿಸಿದರು.