ಉಡುಪಿ : ಹಲಸು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ
Posted On:
18-06-2022 05:10PM
ಉಡುಪಿ : ಹಲಸು ಬೆಳೆಗಾರರು ಗ್ರಾಹಕರಿಗೆ ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಲು ಹಲಸು ಮೇಳ ಕಾರ್ಯಕ್ರಮವು ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರ ಎಸ್. ನಾಯಕ್ ಹೇಳಿದರು
ಅವರು ಇಂದು ದೊಡ್ಡಣ ಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದದಲ್ಲಿ ನಡೆದ ಹಲಸು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ರೈತರು ತಾವು ಬೆಳೆದಂತಹ ಹಲಸನ್ನು ಸಗಟು ಮಾರಾಟಗಾರರಿಗೆ ಅಲ್ಪ ಮೊತ್ತಕ್ಕೆ ಮಾರಾಟ ಮಾಡಿ ಆರ್ಥಿಕ ನಷ್ಟವನ್ನು ಹೊಂದುತ್ತಿದ್ದರು. ಇವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಲಸು, ಮಾವು ಸೇರಿದಂತೆ ಮತ್ತಿತರ ಉತ್ಪನ್ನಗಳ ಮೆಳಗಳನ್ನು ನಡೆಸುತ್ತಿದೆ. ರೈತ ಭಾಂಧವರು ಇಂತಹ ಮೇಳಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಮೇಳದಲ್ಲಿ ತೂಬುಗೆರೆಯ ಹಲಸು , ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸು ಜೊತೆಗೆ ಹಲಸಿನ ಹಣ್ಣಿನ ಪದಾರ್ಥಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಬಿಸ್ಕೆಟ್ ಮುಂತಾದವುಗಳ ಮಾರಾಟವಿತ್ತು.
ಕಲ್ಪರಸ ಹಾಗೂ ಅದರ ಉತ್ಪನ್ನಗಳು, ಜಿಲ್ಲೆಯ ಅಪರೂಪದ ಬೆಳೆಗಳಲ್ಲೊಂದದ ರಂಬೂಟಾನ್ ಹಣ್ಣು, ಜೊತೆಗೆ ಶುದ್ಧ ಜೇನುತುಪ್ಪವು ಲಭ್ಯವಿತ್ತು.
ಕಾರ್ಯಕ್ರಮದಲ್ಲಿ ಸಿಇಓ ಪ್ರಸನ್ನ ಎಚ್. ಮಾತನಾಡಿ, ಸರ್ಕಾರ ಹಲಸು ಬೆಳೆಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ರೂಪಿಸಲು ಚಿಂತಿಸಿದೆ ಅದರ ಭಾಗವಾಗಿ ಹಲಸು ಮೇಳವು ಒಂದಾಗಿದೆ. ಸಾರ್ವಜನಿಕರು ತಮಗೆ ಇಷ್ಟವಾದ ನಮೂನೆಯ ಹಲಸನ್ನು ಮೇಳಗಳಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಈ ಮೇಳವು 2 ದಿನಗಳವರೆಗೆ ನಡೆಯಲಿದ್ದು, ರೈತರು ತಾವು ಬೆಳೆದ ಹಲಸನ್ನು ನೇರವಾಗಿ ಮಾರಾಟ ಮಾಡಲಿದ್ದಾರೆ ಎಂದರು .
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಮತ್ತಿರರರು ಉಪಸ್ಥಿತರಿದ್ದರು.