ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ, ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ ; ಜಿಲ್ಲಾಧಿಕಾರಿಗಳಿಂದ ತನಿಖೆಯ ಭರವಸೆ

Posted On: 21-06-2022 03:36PM

ಉಡುಪಿ : ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉಡುಪಿ ಜಿಲ್ಲೆಯ ಅರ್ ಟಿ ಐ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆ, ಅರ್ ಪಿ ಐ ಪಕ್ಷ , ಕುಂದಾಪುರ ಕನತಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಉಡುಪಿ‌ ಜಿಲ್ಲಾಡಳಿತ ಕಚೇರಿ ಎದುರುಗಡೆ ದಿನ ಪೂರ್ತಿ ಪ್ರತಿಭಟನೆಯನ್ನು ನಡೆಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದು, ಈ ಬಗ್ಗೆ ಹಲವು ದೂರುಗಳನ್ನು ವಿವಿಧ ಸಂಘಟನೆಗಳು ದೂರು ನೀಡಿದರು, ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗಿಳಿದಿದ್ದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯ ,ಕುಂದಾಪುರ ತಹಶಿಲ್ದಾರರ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ,ಬ್ರಹ್ಮಾವರ ಸೀತಾನದಿ ಕಳಪೆ ರಸ್ತೆ ಹಗರಣ , ಮೀಸಲು ಅರಣ್ಯ ಭೂಮಿಯನ್ನು ನಾಶ ಪಡಿಸಿ ಪರಿಶಿಷ್ಟ ಪಂಗಡದ ನಿಧಿ ದುರುಪಯೋಗ ಪಡಿಸಿಕೊಂಡು ರಸ್ತೆ ನಿರ್ಮಾಣ, ಬೈಂದೂರಿನಲ್ಲಿ ಉಪ ತಹಶೀಲ್ದಾರ್ ಭೂ ಕಬಳಿಕೆ ಪ್ರಕರಣ, ಆಯುಷ್ಮಾನ್ ಯೋಜನೆ ಸಮಪರ್ಕವಾಗಿ ಜಾರಿಯಾಗದ ಬಗ್ಗೆ , ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಸರಿಯಾಗಿ ಪಾಲನೆ ಮಾಡದಿರುವ ಬಗ್ಗೆ ಸೇರಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮಗಳನ್ನು ಕೈಗೊಳ್ಳುವಂತೆ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಬೆಳಿಗ್ಗಿನಿಂದಲೂ ಪ್ರತಿಭಟನೆ ನಡೆಸಿದರೂ ಕೂಡ ಜಿಲ್ಲಾಡಳಿತ ಮಾತ್ರ ಪ್ರತಿಭಟನಕಾರರ ಕಡೆಗೆ ತಲೆ ಎತ್ತಿಯೂ ನೋಡದಿರುವುದು ಪ್ರತಿಭಟನಾಕಾರರ ಅಕ್ರೋಶಕ್ಕೆ ಕಾರಣವಾಯ್ತು. ಜಿಲ್ಲಾಧಿಕಾರಿಗಳು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಭ್ರಷ್ಟರನ್ನು ಜಿಲ್ಲಾಡಳಿತ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಸ್ಪಂದಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ ಕಾರ್ಯಕರ್ತರು ಪ್ರತಿಭಟನಾ ಸ್ಥಳದಿಂದ ಕದಲದೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ರಾತ್ರಿವರೆಗೂ ಧರಣಿ ಮುಂದುವರೆಸಿದ್ದರು. ಪೋಲೀಸರು ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಸಾಧ್ಯವಾಗಲಿಲ್ಲ. ಭಾರೀ ಗಾಳಿ ಮಳೆಯನ್ನು ಲೆಕ್ಕಿಸದೇ ಪಟ್ಟು ಹಿಡಿದು ತಡವರಾತ್ರಿವರೆಗೂ ಧರಣಿ ಮುಂದುವರೆಸಿದ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಕೊನೆಗೂ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಸ್ಥಳಕ್ಕೆ ಬಂದು ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದರು.

ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈಗ ನೀಡಿರುವ ದೂರುಗಳ‌ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.ಭ್ರಷ್ಟ ಅಧಿಕಾರಿಗಳ ವಿರುದ್ದ ತನಿಖೆ ನಡೆಸುತ್ತೇವೆ ,ಜಿಲ್ಲಾಡಳಿತಕ್ಕೆ ಸಮರ್ಪಕವಾದ ಮಾಹಿತಿಗಳನ್ನು ನೀಡುವಂತೆಯೂ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಶೇಖರ್ ಹಾವಂಜೆ, ಆರ್. ಟಿ. ಐ ಸಂಘಟನೆಯ ಸತೀಶ್ ಪೂಜಾರಿ , ಸದಾಶಿವ ಶೆಟ್ಟಿ, ಜಯಕರ್ ನಾಯ್ಕ್ , ಸಂಜೀವ ನಾಯ್ಕ್ , ಕಿರಣ್ ಪೂಜಾರಿ, ರಮೇಶ್, ಕೆ ಅರ್ ಎಸ್ ಪಕ್ಷದ ಅಶೋಕ್ ಕಾಡಬೆಟ್ಟು, ಇಕ್ಬಾಲ್ ಕುಂಜಿಬೆಟ್ಟು, ಸದಾಶಿವ ಕೋಟೆಕಾರ್, ಪುರುಷೋತ್ತಮ, ಮತ್ತಿತರರು ಉಪಸ್ಥಿತರಿದ್ದರು.