ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇಂಡಿಯಾ ಬುಕ್ ಆಫ್ ರೆಕಾಡ್೯ನಲ್ಲಿ ಕಾಪುವಿನ ಶಶಾಂಕ್ ಎಸ್. ಸಾಲಿಯಾನ್ ಕಲಾಕೃತಿ ; 13,940 ಮೊಳೆಗಳಲ್ಲಿ ಮೂಡಿದ ಆನೆ

Posted On: 23-06-2022 08:38PM

ಕಾಪು : ಗ್ರಾಮೀಣ ಪ್ರತಿಭೆಯಾಗಿರುವ ಶಶಾಂಕ್, ಕೇರಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು ಮೊಳೆಗಳ ಜೋಡಣೆಯೊಂದಿಗೆ ಆನೆಯ ಕಲಾಕೃತಿ ರಚಿಸಿದ್ದಾರೆ. ಇದೊಂದು ಅಪೂರ್ವ ಸಾಧನೆಯಾಗಿದ್ದು, ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ಕಾಪುವಿನ ಜನತೆಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಕಲಾ ಪ್ರೋತ್ಸಾಹಕ ಗುರುಚರಣ್ ಪೊಲಿಪು ಹೇಳಿದರು. ಅವರು ಕಾಪುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭ ಯುವ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಮಾತನಾಡಿ, ಕೇವಲ ಮೊಳೆಗಳನ್ನು ಬಳಸಿಕೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಕಲಾಕೃತಿ ಮಾಡಿರುವ ದಾಖಲೆ ಇಲ್ಲದಿರುವುದನ್ನು ತಿಳಿದುಕೊಂಡಿದ್ದೆ. ಮೊದಲಾಗಿ 2,000 ಮೊಳೆ ಬಳಸಿ ಸಣ್ಣ ಗಾತ್ರ ಕಲಾಕೃತಿ ರಚಿಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ ತಂದೆ-ತಾಯಿ ಪ್ರೋತ್ಸಾಹ, ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಸಹಕಾರದಿಂದ ಬೃಹತ್ ಗಾತ್ರದ ಕಲಾಕೃತಿ ಮಾಡಲು ಮುಂದಾದೆ. ಕಲಾಕೃತಿ ರಚಿಸಲು ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿ ಇನ್ನಷ್ಟು ಉತ್ತೇಜಿಸಿದರು. ಅರ್ಧ ಇಂಚಿನ 13,940 ಮೊಳೆಗಳನ್ನು ಬಳಸಿಕೊಂಡು ಫೋಮ್ ಶೀಟ್‌ನಲ್ಲಿ 9 ಗಂಟೆಯಲ್ಲಿ ಆನೆಯ ಕಲಾಕೃತಿ ರಚಿಸಲಾಗಿದೆ. ಬ್ರಶ್ ಮತ್ತು ಬಣ್ಣಗಳನ್ನು ಉಪಯೋಗಿಸದೇ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಸಲ್ಲಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಸಂದೇಶ ರವಾನಿಸಿದೆ. ವಾರದೊಳಗೆ ದಾಖಲೆ ಪ್ರಮಾಣ ಪತ್ರ ರವಾನಿಸುವುದಾಗಿಯೂ ತಿಳಿಸಿದೆ ಎಂದರು.

ಶಾಲಾ ದಿನಗಳಲ್ಲಿಯೇ ಕಲಾಕೃತಿ ರಚನೆ ಹವ್ಯಾಸವನ್ನು ಬೆಳೆಸಿಕೊಂಡಿದ್ದ ನಾನು. ಆವೆ ಮಣ್ಣಿನ ಕಲಾಕೃತಿ, ಪೇಂಟಿಂಗ್, ವಾಟರ್ ಕಲರ್, ಆಕ್ರಾಲಿಕ್ ಹೀಗೆ ವಿಭಿನ್ನ ಕಲಾ ಪ್ರಕಾರಗಳಲ್ಲಿ ಕಲಾಕೃತಿ ರಚನೆಯಲ್ಲಿ ತೊಡಗಿರುವುದಾಗಿ ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಶಾಂಕ್ ತಾಯಿ ಪುಷ್ಪಾ ಉಪಸ್ಥಿತರಿದ್ದರು.