ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿರಬೇಕು : ಮನೋಜ್ ಜೈನ್
Posted On:
01-07-2022 03:28PM
ಉಡುಪಿ, ಜೂನ್ 30 : ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹೀಗೆ ಮುಂದುವರೆದಲ್ಲಿ ಅತಿವೃಷ್ಠಿ ಉಂಟಾಗಿ ಸಮಸ್ಯೆಗಳು ಆಗುವ ಸಾಧ್ಯತೆ ಇರುವ ಹಿನ್ನಲೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದರಾಗಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.
ಅವರು ಇಂದು ವರ್ಚುವಲ್ ಮೀಟಿಂಗ್ ಮೂಲಕ ನಡೆದ , ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರಂತರ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಗಳು ಇರುತ್ತವೆ ಅಂತಹ ಪ್ರದೇಶಗಳನ್ನು ಈಗಾಗಲೇ ಗುರ್ತಿಸಿದ್ದು, ಅಲ್ಲಿ ವಾಸಿಸುವ ಜನರಿಗೆ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾಳಜಿ ಕೇಂದ್ರಗಳನ್ನು ಗುರುತಿಸಿ ಸಿದ್ದವಾಗಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು.
ಮಳೆ ಗಾಳಿಯಿಂದಾಗಿ ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಕ್ರಮ ವಹಿಸಲು ಅಗತ್ಯ ಪರಿಕರಗಳೊಂದಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ದರಿರಬೇಕು, ತಗ್ಗುಪ್ರದೇಶದಲ್ಲಿರುವ ಸೇತುವೆಗಳು ಮುಳುಗಡೆಗೊಂಡ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಕಾರ್ಯವನ್ನು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಮಳೆಯಿಂದಾಗಿ ಮನೆ , ಜಾನುವಾರು , ಆಸ್ತಿ ಸೇರಿದಂತೆ ಮತ್ತಿತರ ಹಾನಿಗಳಿಗೆ ನಷ್ಠ ಪರಿಹಾರವನ್ನು ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ಪರಿಹಾರವನ್ನು ಶೀಘ್ರದಲ್ಲಿಯೇ ತಲುಪಿಸಬೇಕು ಎಂದರು.
ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು ,ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ 24 ಗಂಟೆಯೂ ಕಾರ್ಯನಿರ್ವಹಿಸುವುದರೊಂದಿಗೆ , ತುರ್ತು ಕರೆಗಳು ಬಂದಾಗ ತಕ್ಷಣ ಸ್ಪಂದಿಸಬೇಕು ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಭಿತ್ತನೆ ಬೀಜ, ರಸಗೊಬ್ಬರಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಂಭವವಿರುವ ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಸಕ್ತ ಮಳೆಗಾಲ ಮುಗಿಯುವವರೆಗೂ ತಾಲೂಕು ಹಾಗೂ ಗ್ರಾಮ ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಗಳು ಪ್ರತೀ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದ ಅವರು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ವಿಕೋಪ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.