ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ದೈವಾರಾಧಕರಿಗೆ ವಿಶೇಷ ಪಿಂಚಣಿ : ಜಯನ್ ಮಲ್ಪೆ ಆಗ್ರಹ

Posted On: 04-07-2022 05:46PM

ಶಿರ್ವ : ಜೀವನವಿಡೀ ದೈವಾರಾಧನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ದೈವಾರಾಧಕರಿಗೆ ಇಳಿ ವಯಸ್ಸಿನಲ್ಲಿ ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ದಲಿತ ಚಿಂತಕ, ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಜು. ೩ರಂದು ಮೂಡುಬೆಳ್ಳೆ ಕಾಡಬೆಟ್ಟು ಪಂಜುರ್ಲಿ ದೈವಸ್ಥಾನದ ಆವರಣದಲ್ಲಿ ಪಾಣಾರಾ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಘಟಕ ಮತ್ತು ಗಾಂಧೀ ವಿಚಾರ ವೇದಿಕೆ ಉಡುಪಿ ಜಿಲ್ಲಾ ಘಟಕ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 'ಸನ್ಮತಿ' ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಖ್ಯಾತ ಮನೋವೈದ್ಯರಾದ ಡಾ. ಪಿವಿ ಭಂಡಾರಿ ಮಾತನಾಡಿ, ಹೆಚ್ಚುತ್ತಿರುವ ಕೀಳರಿಮೆಯ ಮನಸ್ಥಿತಿಗೆ ಜನರು ಪರಸ್ಪರ ಹೋಲಿಕೆ ಮಾಡಿಕೊಳ್ಳುತ್ತಿರುವುದೇ ಕಾರಣವಾಗಿದ್ದು, ವ್ಯಕ್ತಿಯು ತನ್ನನ್ನು ಇರುವಂತೆ ಸ್ವೀಕರಿಸಿ ಮುನ್ನಡೆದಾಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾನೂನು ಅರಿವು ಮೂಡಿಸಿದರು. ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶುಭಾಶಂಸನೆಗೈದರು. ಪಾಣಾರ ಸಂಘದ ಹಿರಿಯ ದೈವಾರಾಧಕ ಶಿವ ಪಾಣಾರ ಶಿರ್ವ ಅವರನ್ನು ಸಮ್ಮಾನಿಸಲಾಯಿತು.

ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣೇಶ ಗಂಗೊಳ್ಳಿ ಅವರು ಗೀತ ಗಾಯನ ನಡೆಸಿಕೊಟ್ಟರು. ಸುದೀಪ್ ಭೀಮವಾಣಿ ಮೊಳಗಿಸಿದರು. ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಪಂಜುರ್ಲಿ ದೈವಸ್ಥಾನದ ಪರಿಚಾರಕ ಶೇಖರ ಪಾಣಾರ್, ಉದ್ಯಮಿ ಎ.ಕೆ. ಆಳ್ವಾ, ಸಾಹಿತಿ ಆರ್.ಡಿ. ಪಾಂಬೂರು, ಗಾಂಧಿ ವಿಚಾರ ವೇದಿಕೆಯ ಕಟೀಲು ಸೀತ್ಲ ರಂಗನಾಥ ರಾವ್ ಉಪಸ್ಥಿತರಿದ್ದರು.

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ ನಿರೂಪಿಸಿದರು. ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ಅಧ್ಯಕ್ಷೆ ಸೌಜನ್ಯಾ ಶೆಟ್ಟಿ ವಂದಿಸಿದರು.