ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸುರತ್ಕಲ್ : ಸಂಸದರು, ಶಾಸಕರು ಅಕ್ರಮ ಟೋಲ್ ಪರ - ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪ ; ಸುರತ್ಕಲ್ ಟೋಲ್ ಗೇಟ್ಗೆ ಮುತ್ತಿಗೆ ನಿರ್ಧಾರ

Posted On: 07-07-2022 11:04PM

ಸುರತ್ಕಲ್ : ವಿಲೀನದ ನಿರ್ಣಯ, ಹೆದ್ದಾರಿ ಸಚಿವರ ಭರವಸೆ, ಸತತ ಹೋರಾಟಗಳ ಹೊರತಾಗಿಯೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸ್ಥಳೀಯ ಸಂಸದ, ಶಾಸಕರುಗಳೇ ಕಾರಣ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸುಂಕ ಸಂಗ್ರಹದ ಗುತ್ತಿಗೆದಾರರು ಅಕ್ರಮ ಟೋಲ್ ಗೇಟ್ ಪರ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಆರೋಪಿಸಿದೆ‌. ಇಂದು ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು‌. ಸಂಸದರು, ಶಾಸಕರು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಸಭೆ ನಿರ್ಧರಿಸಿತು.

ಮಾರ್ಚ್ 22 ರಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ನೀಡಿದ ಭರವಸೆಯ ನಂತರದ ಬೆಳವಣಿಗೆಗಳನ್ನು ಸಭೆ ಚರ್ಚಿಸಿತು. 2018 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡ ನಿರ್ಣಯದ ಪ್ರಕಾರ ಸುರತ್ಕಲ್ ಟೋಲ್ ಗೇಟ್ ವರ್ಷಗಳ ಹಿಂದೆಯೇ ತೆರವುಗೊಳ್ಳಬೇಕಿತ್ತು. ದಿನವೊಂದಕ್ಕೆ 15 ಲಕ್ಷ ರೂಪಾಯಿಗೂ ಹೆಚ್ಚು ಸುಂಕ ಸಂಗ್ರಹ ಆಗುವ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಗುತ್ತಿಗೆ ಮಾಫಿಯಾ ಆಗಿ ಬೆಳೆದಿದೆ. ಅದಲ್ಲದೆ ಇದೇ ರಸ್ತೆ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ವರ್ಷವೊಂದಕ್ಕೆ ಖಾಸಗಿ ಏಜನ್ಸಿಗೆ ಗುತ್ತಿಗೆ ನೀಡಲಾಗುತ್ತಿದೆ‌. ಈ ಹತ್ತಾರು ಕೋಟಿ ರೂಪಾಯಿ ಲಾಭದ ವ್ಯವಹಾರದ ಹಿತಾಸಕ್ತಿ ಟೋಲ್ ಗೇಟ್ ತೆರವಿಗೆ ದೊಡ್ಡ ಅಡ್ಡಿಯಾಗಿದೆ. ಇಂತಹ ಹಿತಾಸಕ್ತಿಗಳ ಪರವಾಗಿ ಸಂಸದರು, ಶಾಸಕರು ನಿಂತಿದ್ದಾರೆ ಎಂದು ಹೋರಾಟ ಸಮಿತಿ ಸಭೆ ಗಂಭೀರ ಆರೋಪ ಮಾಡಿದೆ. ರಸ್ತೆ ನಿರ್ವಹಣೆ ಗುತ್ತಿಗೆ ಪಡೆದ ಕಂಪೆನಿ ಮಳೆಗಾಲದ ಮುಂಚಿತವಾಗಿ ದುರಸ್ತಿ ಕೆಲಸ ನಡೆಸದಿರುವುದರಿಂದ ಹೆದ್ದಾರಿ ಪೂರ್ತಿ ಗುಂಡಿಮಯವಾಗಿ ಸಂಚಾರ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಕೂಳೂರು ಹೊಸ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಹಳೆ ಸೇತುವೆ ಪ್ರಯಾಣಕ್ಕೆ ಅಯೋಗ್ಯ ಸ್ಥಿತಿಗೆ ತಲುಪಿದೆ. ಇಂತಹ ಕೆಟ್ಟ ರಸ್ತೆಗೆ ಬಲವಂತದಿಂದ ಟೋಲ್ ಪಾವತಿ ಮಾಡುವ ಸ್ಥಿತಿ ವಾಹನ ಸವಾರರಿಗೆ ಬಂದೊದಗಿದೆ. ಜನತೆ ಈ ಕುರಿತು ಆಕ್ರೋಶಗೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕರುಗಳ ಕರ್ತವ್ಯ ಚ್ಯುತಿಯ ಕುರಿತು ಸಚಿವ ನಿತಿನ್ ಗಡ್ಕರಿಗೆ ವಿವರವಾದ ಪತ್ರ ಬರೆಯಲು ಹೋರಾಟ ಸಮಿತಿ ನಿರ್ಧರಿಸಿತು ಹಾಗೂ ಟೋಲ್ ಗುತ್ತಿಗೆ ನವೀಕರಣ ಪ್ರಕ್ರಿಯೆ ಕೈ ಬಿಟ್ಟು, ಟೋಲ್ ಗೇಟ್ ತೆರವಿಗೆ ತಕ್ಷಣ ಕ್ರಮಗಳನ್ನು ಜನಪ್ರತಿನಿಧಿಗಳು ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಸಮಿತಿ ಸಭೆ ತೀರ್ಮಾನಿಸಿತು‌.

ಸಭೆಯ ಅಧ್ಯಕ್ಷತೆಯನ್ನು ವಸಂತ ಬೆರ್ನಾಡ್ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ವಿವಿಧ ಸಂಘಟನೆಗಳ ಪ್ರಮುಖರಾದ ವೈ ರಾಘವೇಂದ್ರ ರಾವ್, ಮೂಸಬ್ಬ ಪಕ್ಷಿಕೆರೆ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಹರೀಶ್ ಪೇಜಾವರ, ಯೋಗೀಶ್ ಕೋಟ್ಯಾನ್ ಮುಲ್ಕಿ, ರಾಜೇಶ್ ಪೂಜಾರಿ ಕುಳಾಯಿ, ಟಿ ಎನ್ ರಮೇಶ್ ಸುರತ್ಕಲ್, ಸಲೀಂ ಶ್ಯಾಡೋ, ರಮೀಝ್ ಪಡುಬಿದ್ರೆ, ಶ್ರೀಕಾಂತ್ ಸಾಲ್ಯಾನ್, ಶ್ರೀನಾಥ್ ಕುಲಾಲ್, ರಶೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು‌.