ಉಡುಪಿ : ಸಾರ್ವಕಾಲಿಕ ಸತ್ಯನಿಷ್ಠವಾದ ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಂತೆ ಸರ್ಕಾರವು ಪದೇ ಪದೇ ನಕಾರಾತ್ಮಕ ನಿಲುವನ್ನು ಪ್ರಕಟಿಸುತ್ತಿರುವುದು ಸಮಂಜಸವಲ್ಲ. ಗಣರಾಜ್ಯೋತ್ಸವ ಟ್ಯಾಬ್ಲೋ ತಿರಸ್ಕಾರದ ಬಳಿಕ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಗುರುಗಳ ಚಿಂತನೆಯ ಪಾಠವನ್ನು ಕೈಬಿಟ್ಟಿರುವುದರ ಕುರಿತು ಈಗಾಗಲೇ ಸಚಿವರುಗಳಿಗೆ ಮನವಿ ಸಲ್ಲಿಸಿದಾಗ ಯಾವುದೇ ಸಮಸ್ಯೆಯಾಗದಂತೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದು ಸುಳ್ಳಾಗಿದ್ದು ಗುರುಗಳನ್ನು ಕೇವಲ ಭಾಷಾ ಪಾಠದಲ್ಲಿ ತೋರಿಸಿ ಮೆಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ನಂಬಿಸಿದ್ದಾರೆ. ಗುರುಗಳ ಅನುಯಾಯಿಗಳಾದ ನಮಗೆ ಸರ್ಕಾರದ ನಡೆಯ ಕುರಿತು ತೀವ್ರ ಅಸಮಾಧಾನವಿದ್ದು ಈಗಾಗಲೇ ನೀಡಿರುವ ಮನವಿಯನ್ನು ಕಡೆಗಣಿಸಿದ್ದರ ಕುರಿತಾಗಿ ಸಂಘಟನಾ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಇದರ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಆಗ್ರಹಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವಮಾನವೇ ಸಮಾಜ ಸುಧಾರಣೆಗೆ ಸೀಮಿತವಾಗಿರುವಾಗ ನಾವೂ ಕೂಡ ಪಕ್ಷಾತೀತವಾಗಿ ಸಮಾಜದ ಪರ ಸಮಾನಮನಸ್ಕ ನಿಲುವಿನಲ್ಲಿ ಗುರುಗಳ ಪಠ್ಯಕ್ರಮ ಈ ಹಿಂದಿನಂತೆ ಯಥಾಸ್ಥಿತಿಯಲ್ಲಿರಬೇಕೆಂದು ಬಯಸುತ್ತೇವೆ. ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ವಿರೋಧಿಸಬೇಕು, ಕೇವಲ ಅಧಿಕಾರಕ್ಕೋಸ್ಕರ ಗುರುಗಳನ್ನು ಜಪಿಸುವ ಬದಲು ಯಾವ ಪಕ್ಷದ ಯಾವ ಪ್ರತಿನಿಧಿಯೆ ಆಗಲಿ ಸದ್ರಿ ಹಾಗೂ ಮುಂದೆಯೂ ಗುರುಗಳಿಗೆ ಅವಮಾನವಾಗದಂತೆ ನಡೆಯುವುದು ಸಾಮಾಜಿಕ ಸೌಹಾರ್ದ ಸ್ಥಿತಿಗತಿಗೆ ಅತ್ಯಂತ ಅಗತ್ಯ ಎಂದು ತಿಳಿಸಿದ್ದಾರೆ.