ಜುಲೈ 24 : ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ
Posted On:
19-07-2022 11:29PM
ಕಾಪು : ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ.), ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದರಂಗಡಿ ಇದರ ಸಹಭಾಗಿತ್ವದಲ್ಲಿ ಜುಲೈ 24ರಂದು ವಿದ್ಯಾ ಪೋಷಕ ನಿಧಿ (2022-23)ವಿದ್ಯಾರ್ಥಿ ವೇತನವನ್ನು ಸುಮಾರು 500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಸುಮಾರು 70 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಗಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವ ಮಂಗಲ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಎಂದು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾಪು ವೆಂಕಟರಮಣ ದೇವಳದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಂಬಯಿಯ ಖ್ಯಾತ ಸುಪ್ರೀಂ ಕೋರ್ಟ್ ವಕೀಲರಾದ ರವಿಚಂದ್ರ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪಿ ರವೀಂದ್ರ ದಯಾನಂದ ಪೈಯವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಮೈಸೂರು ಇದರ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ, ಅಮೇರಿಕದ ವಾಷಿಂಗ್‌ಟನ್ ಡಿಸಿಯ ಇಂಡಿಯನ್ ಸಿಎ ಎಸೋಸಿಯೇಷನ್ ನ ಸ್ಥಾಪಕಾಧ್ಯಕ್ಷರು, ಹಾಗೂ ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕರಾಗಿರುವ ಸಿಎ ಗೋಕುಲ್‌ದಾಸ್ ಪೈ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ಮುದರಂಗಡಿ ಇದರ ವಿಶ್ವಸ್ಥರಾದ ರತ್ನಾಕರ ಕಾಮತ್, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಪಿ ರಾಮಚಂದ್ರ ಶೆಣೈರವರು ಭಾಗವಹಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಬಯಿಯ ಎಮ್.ವಿ. ಕಿಣಿ ಲಾ-ಫರ್ಮ್ ನ ಸಂಸ್ಥಾಪಕರಾದ ಖ್ಯಾತ ಸುಪ್ರೀಂ ಕೋರ್ಟ್ ನ ವಕೀಲರಾದ ಮಣಿಪುರ ವಸಂತ ಕಿಣಿ, ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್ ಆಫ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್ ರವರ ದಿಕ್ಸೂಚಿ ಭಾಷಣ, ಮುಖ್ಯ ಅತಿಥಿಗಳಾಗಿ ಮುಂಬಯಿ ನ್ಯಾಚುರಲ್ ಐಸ್ ಕ್ರೀಂನ ಆಡಳಿತ ನಿರ್ದೇಶಕರಾದ ರಘುನಂದನ್ ಎಸ್. ಕಾಮತ್, ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರರಾದ ಶ್ರೀ ಪ್ರಸಾದ ಶೆಣೈ, ರಾಯಚೂರಿನ ಹೆಸರಾಂತ ಲೆಕ್ಕ ಪರಿಶೋಧಕರಾದ ಉಪ್ಪುಂದ ರಾಮಚಂದ್ರ ಪ್ರಭು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿಯ ತ್ರಷಾ ವಿದ್ಯಾಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ರವರಿಂದ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಹಾಗೂ ಭಾರತೀಯ ಸೇನೆಯಲ್ಲಿ ಯುವ ಜನರಿಗೆ ಲಭ್ಯವಿರುವ ಅವಕಾಶಗಳು, ಸವಾಲುಗಳು ಮತ್ತು ಕಾರ್ಗಿಲ್ ಹುತಾತ್ಮ ಮರಣೋತ್ತರ ಶೌರ್ಯಚಕ್ರ ಪುರಸ್ಕೃತ ಲೆ|ಕ| ಅಜಿತ್ ವಿ ಭಂಡಾರ್ಕಾರ್ ರವರ ಜೀವನ ಸಾಧನೆಯ ವಿಶೇಷ ಸಾಕ್ಷ್ಯಚಿತ್ರ ಮತ್ತು ವಿಶೇಷ ಉಪನ್ಯಾಸವನ್ನು ಬೆಂಗಳೂರಿನ ಶಕುಂತಲಾ ಭಂಡಾಕಾರ್ ರವರು ನಿರ್ವಹಿಸಲಿದ್ದಾರೆ. ಕಾರ್ಗಿಲ್ ಹುತಾತ್ಮ ಲೆ|ಕ|ಶೌರ್ಯಚಕ್ರ ಪುರಸ್ಕೃತ ಅಜಿತ್ ವಿ ಭಂಡಾರ್ಕಾರ್ ರವರ ಧರ್ಮಪತ್ನಿ ಶಕುಂತಲಾ ಎ. ಭಂಡಾರ್ಕಾರ್ ರವರಿಗೆ ವಿಶೇಷ ಸನ್ಮಾನ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ, ನೀಟ್ ಮಾಡಲಾದ ಉನ್ನತ ವ್ಯಾಸಂಗದ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಗೈದ ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಂದನೆ ನಡೆಯಲಿದೆ ಎಂದರು.
ಈ ಸಂದರ್ಭ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಕೊಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಿಎ ಎಸ್ ಎಸ್ ನಾಯಕ್, ವಿಜಯಕುಮಾರ್ ಶೆಣೈ, ಸಿಎ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.