ಪಡುಬಿದ್ರಿ : ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ತ್
Posted On:
24-07-2022 11:36PM
ಪಡುಬಿದ್ರಿ : ತುಳುನಾಡು ಕೃಷ್ಣದೇವರಾಯ ಅರಸರಾಗಿ, ಹಲವಾರು ಸಾಮಂತರಾಜರು ಆಳಿದ ಸ್ಥಳವಾಗಿದೆ. ತುಳು ನೆಲದಲ್ಲಿ ವಿಶೇಷತೆ, ಅದರದೇ ಆದ ಮಹಿಮೆ ಜಗತ್ತಿನಲ್ಲಿ ಸ್ಥಾನವನ್ನು ಪಡೆದಿದೆ. ಇಲ್ಲಿ ಬಂದು ಅಧ್ಯಯನ ನಡೆಸಿದ ಬ್ರಿಟಿಷರಿಗೆ ಇಲ್ಲಿನ ಜನಪದ ಸಂಸ್ಕೃತಿ ಅವರನ್ನು ಕುತೂಹಲಿಗರನ್ನಾಗಿಸಿದೆ. ಅವರು ದಾಖಲಿಸಿದ್ದು ಜನರಿಗೆ ತಿಳಿಯುವಂತಾಗಿದೆ. ಜಗತ್ತಿನ ಹಲವಾರು ಭಾಷೆಗಳಿಗೆ ಅವುಗಳದೇ ಆದ ಮಹತ್ವ, ವ್ಯಾಪ್ತಿಯಿದೆ. ಸರಕಾರದ ಮಟ್ಟದಲ್ಲಿ ಮಾನ್ಯತೆ ದೊರಕಿದೆ. ಆದರೆ ಎಲ್ಲ ಇದ್ದು ಏನೂ ಇಲ್ಲದಂತೆ ಇರುವ ಭಾಷೆಯಾಗಿ ತುಳುವಿದೆ. ಸ್ವತಂತ್ರ ಕ್ಯಾಲೆಂಡರ್, ಸ್ವತಂತ್ರ ಲಿಪಿ, ಅಷ್ಟಮಠಾಧಿಪತಿಗಳು ತುಳು ಲಿಪಿಯಲ್ಲಿಯೇ ಸಹಿ ಹಾಕುವ ರೂಢಿಯಿದೆ. ಅಸಂಖ್ಯಾತ ಶಿಲಾಶಾಸನಗಳು, ಅಸಂಖ್ಯಾತ ತಾಮ್ರ ಶಾಸನಗಳು ತುಳುವಲ್ಲಿ ಇದೆ. ವಿಶ್ವದಲ್ಲಿ ಎರಡುವರೆ ಕೋಟಿ ಜನಸಂಖ್ಯೆ ಇದ್ದರೂ ತುಳು ಅಧಿಕೃತ ಭಾಷೆ ಆಗಲಿಲ್ಲ. ನಾವು ನಮ್ಮ ಭಾಷೆಯನ್ನು ಮರೆಯದಿರಲು ನಮ್ಮ ಕಾರ್ಯಕ್ರಮ, ಮನೆ ಮನಗಳಲ್ಲಿ ತುಳು ಭಾಷೆಯ ಬಳಕೆ ಅನಿವಾರ್ಯ. ಅದರಲ್ಲೂ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಒಂದಾದ ಆಟಿ ಆಚರಣೆಯು ನಮ್ಮಲ್ಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ಜರಗಿದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಕಲಶಕ್ಕೆ ಭತ್ತವನ್ನು ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೂಢನಂಬಿಕೆ, ರೂಢನಂಬಿಕೆಗಳು ಭಿನ್ನ. ಆಟಿದ ಆಚರಣೆಯ ಹಿನ್ನೆಲೆಯನ್ನು ತಿಳಿಯಬೇಕಾಗಿದೆ. ವೈಜ್ಞಾನಿಕ ಮಹತ್ವ ಮತ್ತು ಆರೋಗ್ಯಯುತ ಆಹಾರ ಪದಾರ್ಥಗಳನ್ನು ಬಳಸುವಲ್ಲಿ ಮಹತ್ವದ ಅಂಶಗಳನ್ನು ನಮಗೆ ತಿಳಿಸುತ್ತದೆ ಎಂದರು.
ಈ ಸಂದರ್ಭ ಶಿಕ್ಷಣ ಕ್ಷೇತ್ರದ ಸಾಧಕಿ, ಶಿಕ್ಷಕಿ ವಂದನಾ ರೈ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅಕಾಡೆಮಿ ಸದಸ್ಯ ಮಾಧವ ಭಂಡಾರಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಇನ್ನರ್ವೀಲ್ ಅಧ್ಯಕ್ಷೆ ವಿಮಲ ಸಾಲ್ಯಾನ್, ಕಾರ್ಯದರ್ಶಿ ಸುನಿತ ಭಕ್ತವತ್ಸಲ, ರೋಟರಿ ಅಧ್ಯಕ್ಷೆ ಗೀತಾ ಅರುಣ್, ಕಾರ್ಯದರ್ಶಿ ಜ್ಯೋತಿ ಮೆನನ್, ಪುಷ್ಪಲತಾ, ಅನಿತಾ ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ ನ ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು.