ಪಡುಬಿದ್ರಿ : ಅನಧಿಕೃತ ಅಪಾಯಕಾರಿ ಗ್ಯಾಸ್ ಗೋಡೌನ್ ತೆರವಿಗೆ ಪ್ರತಿಭಟನೆ ; ತಹಶಿಲ್ದಾರರಿಂದ ತೆರವಿನ ಭರವಸೆ
Posted On:
25-07-2022 09:55PM
ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ ಇದರ ವತಿಯಿಂದ ಪಡುಬಿದ್ರಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಲು ಬ್ರಹತ್ ಪ್ರತಿಭಟನೆ ಹಾಗೂ ಧರಣಿ ಜುಲೈ 25ರಂದು ಜರುಗಿತು.
ಪಡುಬಿದ್ರಿ ಪಾದೆಬೆಟ್ಟು ಗ್ರಾಮದಲ್ಲಿ ಪಂಚಾಯತ್ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಿ ದಲಿತ ಕುಟುಂಬಗಳನ್ನು ಹಾಗೂ ಪಾದೆಬೆಟ್ಟು ಗ್ರಾಮಸ್ಥರನ್ನು ಅಪಾಯದಿಂದ ರಕ್ಷಿಸುವಂತೆ ಒತ್ತಾಯಿಸಿ ಪಾದೆಬೆಟ್ಟು ಎಸ್.ಸಿ.ಕಾಲೊನಿಯಿಂದ ಪಡುಬಿದ್ರಿ ಪಂಚಾಯತ್ ತನಕ ಜಾಥಾ ಹೊರಟು ಪಂಚಾಯತ್ ವಠಾರದಲ್ಲಿ ಧರಣಿ ಕುಳಿತುಕೊಳ್ಳಲಾಯಿತು.
ಸ್ಥಳಕ್ಕೆ ಕಾಪು ತಹಶಿಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣ, ಪಿಡಿಒ ಪಂಚಾಕ್ಷರಿ ಹಿರೆಮಠ್, ಪಡುಬಿದ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಶೆಟ್ಟಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು.
ದ.ಸ.ಅಂ ಅಧ್ಯಕ್ಷರು ಮನವಿ ಕೊಟ್ಟು ಆದಷ್ಟು ಶೀಘ್ರವಾಗಿ ಅಲ್ಲಿಂದ ಗೋಡೌನನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಶಿಲ್ದಾರರು ಕಾನೂನು ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯವಿದೆ ಎಂದು ನೋಡಿ ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.