ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ

Posted On: 28-07-2022 05:53PM

ಉಡುಪಿ : ವನಮಹೋತ್ಸವದಂತಹ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೆ, ನಾವು ನೆಡುವ ಪ್ರತಿ ಗಿಡವು ವೃದ್ಧಿಯಾಗುವಂತೆ ನೋಡಬೇಕು. ಪ್ರಕೃತಿಯಲ್ಲಿ ನಾವು ನೆಟ್ಟ ಗಿಡ ಮರವಾಗಿ ಬೆಳೆದಾಗ ಅದರಿಂದ ನಮಗೂ ನೆಮ್ಮದಿ ಸಿಗುತ್ತದೆ. ವನಮಹೋತ್ಸವದಂತಹ ಕಾರ್ಯಕ್ರಮಗಳು ಪವಿತ್ರ ಕಾರ್ಯಕ್ರಮವೆಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ನೇತೃತ್ವದಲ್ಲಿ ಉದ್ಯಾವರ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ 500 ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಕಾರ್ಯಕ್ರಮದ ಪ್ರಾಯೋಜಕರು ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ಯೋಗೀಶ್ ಕೋಟ್ಯಾನ್ ಮಾತನಾಡುತ್ತಾ, ತಾಪಮಾನ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಪರಿಸರವನ್ನು ಉಳಿಸಬಹುದು. ಮಾತ್ರವಲ್ಲದೆ ಕಾಲಕಾಲಕ್ಕೆ ಬೇಕಾದ ಗಾಳಿ ಮಳೆ ನಮಗೆ ದೊರಕುತ್ತದೆ. ವಿದ್ಯಾರ್ಥಿಗಳು ಇಂದು ಪಡಕೊಂಡ ಗಿಡಗಳನ್ನು ತಮ್ಮ ಮನೆಯ ಆವರಣದಲ್ಲಿ ಬೆಳೆಸಿ ಉತ್ತಮ ರೀತಿಯಲ್ಲಿ ಪೋಷಣೆ ಮಾಡಿ. ಮುಂದಿನ ದಿನಗಳಲ್ಲಿ ಒಳ್ಳೆಯ ಗಿಡ ಬೆಳೆಸಿದವರೆಗೆ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ತಿಳಿಸಿದರು. ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆ, ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ಸಂದರ್ಭದಲ್ಲಿ ಗಿಡ ವಿತರಣೆ ನಡೆಸಲಾಯಿತು.

ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಮತ್ತು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಗಿಡ ನೀಡುವುದರ ಮೂಲಕ ವಾಗಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯ ಉಡುಪಿ ಇದರ ಅರಣ್ಯ ಪ್ರೇರಕರಾಗಿರುವ ಪ್ರತ್ಯಕ್ಷ್ ಕಾಮತ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಲಯನ್ಸ್ ಜಿಲ್ಲಾ ಡೈರೆಕ್ಟರಿ ಎಡಿಟರ್ ಸ್ವಪ್ನಾ ಸುರೇಶ್, ವಲಯ ಎರಡರ ವಲಯಾಧ್ಯಕ್ಷ ಜೋನ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷ ಪ್ರವೀಣ್ ಕರ್ವಾಲೋ, ಕ್ಯಾಬಿನೆಟ್ ಸದಸ್ಯ ಗೊಡ್ಫ್ರಿ ಡಿಸೋಜಾ, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಶಾಲಾ ಕಾಲೇಜು ಮುಖ್ಯೋಪಾಧ್ಯಾಯರು ಮತ್ತು ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.