ಕಾಪು : ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಪತ್ರಿಕಾ ಮಾಹಿತಿ ಕಾರ್ಯಾಗಾರ
Posted On:
29-07-2022 09:17PM
ಕಾಪು : ಪ್ರಸ್ತುತ ವಿದ್ಯಮಾನದಲ್ಲಿ ಪತ್ರಿಕೆಗಳ ಮಹತ್ವ ಯುವ ಸಮುದಾಯ ಅರಿಯಬೇಕಾಗಿದೆ. ಪತ್ರಿಕೆಗಳ ಮೂಲಕ ಒಂದಷ್ಟು ಜ್ಞಾನದ ಹೊನಲನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕಾಗಿದೆ. ಹಿಂದಿನ ಹಲವಾರು ಪತ್ರಿಕೆಗಳು ಪರಿಶ್ರಮದ ಮೂಲಕ ಜನರಿಗೆ ಸುದ್ದಿಯನ್ನು ನೀಡುತ್ತಿದ್ದವು. ಇಂದು ರಾಜಕೀಯ ಮೇಲಾಟದಲ್ಲಿ ಪತ್ರಿಕಾ ವ್ಯವಸ್ಥೆ ಕುಸಿಯುತ್ತಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇದರ ಪ್ರಾಂಶುಪಾಲರಾದ ಡಾ|ಅನಿಲ್ ಕುಮಾರ್ ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ನಡೆದ ಪತ್ರಿಕಾ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಎಂಜಿಎಂ ಕಾಲೇಜು ಉಡುಪಿ ಇದರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಕಾಮತ್ ಮಾತನಾಡಿ ಯುವ ಜನಾಂಗ ನಮ್ಮಲ್ಲಿರುವ ಅಂತರ್ಗತ ಶಕ್ತಿಯನ್ನು ಹೊರಗೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಇಂದು ವಿಪುಲ ಅವಕಾಶಗಳಿವೆ. ಸಾಮಾಜಿಕ ವ್ಯವಸ್ಥೆಗಳನ್ನು ಬದಲಾಯಿಸುವ ಶಕ್ತಿ ಸಮೂಹ ಮಾಧ್ಯಮಗಳಿಗಿವೆ. ಪತ್ರಿಕೋದ್ಯಮದ ಅಧ್ಯಯನ ಮಾಡಿದವರಿಗೆ ಬಹಳಷ್ಟು ಅವಕಾಶಗಳಿವೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮಾತನಾಡಿ ಯುವಕರು ಸುಳ್ಳು ಸುದ್ದಿಗಳನ್ನು ನಂಬದೇ ತಮ್ಮ ಜೀವನವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಬದುಕನ್ನು ರೂಪಿಸುವ ಕಡೆಗೆ ಗಮನ ನೀಡುವ ಮೂಲಕ ಭವಿಷ್ಯದ ಯೋಚನೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್ ವಹಿಸಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು ಉಪಸ್ಥಿತರಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ಸಂತೋಷ್ ನಾಯಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಉಪನ್ಯಾಸಕಿ ಡಾ| ಸುಚಿತ್ರ ವಂದಿಸಿದರು.