ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆ - ಮುದ್ದು ಮೂಡುಬೆಳ್ಳೆ

Posted On: 31-07-2022 03:08PM

ಶಿರ್ವ: 11ನೇ ವಯಸ್ಸಿಗೆ ಮುಂಬಯಿಗೆ ತೆರಳಿ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ, ರಾತ್ರಿ ಶಾಲೆಯಲ್ಲಿ ಕಲಿತು, ಮುಂಬಯಿ ಶಿವಾಜಿ ಪಾರ್ಕಿನಲ್ಲಿ ಮಹಾತ್ಮಾ ಗಾಂಧೀಜಿಯವರ ಭಾಷಣವನ್ನು ಆಲಿಸಿ ಪ್ರಭಾವಿತಗೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು, ಹಲವಾರು ಚಳುವಳಿಗಳಲ್ಲಿ ಪಾಲ್ಗೊಂಡವರು, ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಭೂಗತರಾಗಿ ಚಳವಳಿಗಳನ್ನು ಮುಂದುವರೆಸಿದವರು, ಕೃಷ್ಣಮೆನನ್ ರವರ ಆಪ್ತರಾಗಿ ಸಕ್ರಿಯರಾಗಿದ್ದವರು ಎಸ್ಕೆ. ಸುವರ್ಣ‌ರವರು. ಇಂಥ ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆಗಳಾಗಿದ್ದು, ಶಾಶ್ವತ ಮೌಲ್ಯ ಹೊಂದಿರುವಂತದ್ದಾಗಿವೆ ಎಂದು ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಉದ್ಘೋಷಕರು, ಕನ್ನಡ, ತುಳು ಸಾಹಿತಿ ಆಗಿರುವ ಮುದ್ದು ಮೂಡುಬೆಳ್ಳೆ ನುಡಿದರು. ಅವರು ಪಡುಬೆಳ್ಳೆ ನಾರಾಯಣಗುರು ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಜರಗಿದ ಸ್ವಾತಂತ್ರ್ಯ ಹೋರಾಟಗಾರ, ಪಾರಂಪರಿಕ ವೈದ್ಯ ಪಂಡಿತ್ ಎಸ್.ಕೆ. ಸುವರ್ಣ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ‌ ಸಲ್ಲಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತಾಂಜಲಿ ಸರಣಿಯ ಅಂಗವಾಗಿ ಜರಗಿದ ಸಂಸ್ಮರಣಾ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು.

ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ಪಂಡಿತ್ ಎಸ್.ಕೆ. ಸುವರ್ಣ ಅವರ ಪುತ್ರ ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ, ಡಾ. ಅಭಿನವ್ ಎಸ್. ಸುವರ್ಣ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಿನರಾಜ್ ಸಾಲ್ಯಾನ್, ತಾಪಂ ಮಾಜಿ ಸದಸ್ಯೆ ಗೀತಾ ವಾಗ್ಳೆ, ಜಿಪಂ ಮಾಜಿ ಸದಸ್ಯೆ ಐಡಾ ಗಿಬ್ಬ ಡಿಸೋಜ, ಗ್ರಾಪಂ ಮಾಜಿ ಸದಸ್ಯ ಗಿಬ್ಬ ಡಿಸೋಜ, ಡಿಎಸ್ಎಸ್ ಹಿರಿಯ ಕಾರ್ಯಕರ್ತ ಎಂ. ರಮೇಶ್ ಬೆಳ್ಳೆ, ಲಿಯೋ ಅರಾಹ್ನಾ ಬೆಳ್ಳೆ ಉಪಸ್ಥಿತರಿದ್ದರು.

ಶ್ರೀ‌ ನಾರಾಯಣ ಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಸ್. ಸ್ವಾಗತಿಸಿ, ಪ್ರಸ್ತಾವಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು.