ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ
Posted On:
01-08-2022 10:53PM
ಶಿರ್ವ : ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ಗಳನ್ನು ಬಳಸಲಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯಕ. ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಸದುಪಯೋಗ ದಿಂದ ಉತ್ತಮ ಉಪಾದಿ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇವತ್ತು ಕಂಪ್ಯೂಟರ್ ಒಂದು ಮೂಲಭೂತ ಅಗತ್ಯ ವಸ್ತುವಾಗಿದೆ. ಶಿಕ್ಷಣ ,ಆರೋಗ್ಯ ,ಪ್ರಾಕೃತಿಕ ಹಿನ್ನಲೆಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಇಲ್ಲಿನ ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲಾದ 5 ಕಂಪ್ಯೂಟರ್ ಗಳನ್ನು ಕರ್ಣಾಟಕ ಬ್ಯಾಂಕ್ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜ್ ಗೋಪಾಲ್ ಬಿ. ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಹೆರಾಲ್ಡ್ ಐವನ್ ಮೋನಿಸ್ ಅವರು ಸಮಾಜ ಕಾಯ೯ ಕೆಲಸಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದು ಎಂದು ನಮ್ಮ ಕಾಲೇಜಿಗೆ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮ್ಯಾನೇಜರ್ ಮತ್ತು ಅವರ ಸಿಬ್ಬಂದಿ ವಗ೯ದವರನ್ನು ಅಭಿನಂದಿಸಿದರು
ಸಂತಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಡಾ| ಲೆಸ್ಲಿ ಸಿ.ಡಿಸೋಜ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸಮಾಜದ ಋಣವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡು ಮುಂದೆ ಸಮಾಜಕ್ಕೆ ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಹಾಗೂ ಸಮಾಜಮುಖಿ ಕೆಲಸದಲ್ಲಿ ಒಂದು ಹೆಜ್ಜೆ ಮುಂದಿರಬೇಕೆಂದೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕೆಂದು ತಮ್ಮ ಆಶಿವ೯ಚನದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ವ ಬ್ರಾಂಚಿನ ಮ್ಯಾನೇಜರ್ ಜನಾರ್ಧನ್, ಕ್ಲೆರಿಕಲ್ ಸ್ಟಾಫ್ ಶ್ರೀನಿವಾಸ ಪೈ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ, ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ದಿವ್ಯಶ್ರೀ ಬಿ ಕಾರ್ಯಕ್ರಮ ಸಂಯೋಜಿಸಿದರು.