ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸುವಲ್ಲಿ ಪೋಷಕರ ಸಹಕಾರ ಅತ್ಯಗತ್ಯ : ಗುರ್ಮೆ ಸುರೇಶ್ ಶೆಟ್ಟಿ

Posted On: 07-08-2022 09:22PM

ಕಾಪು : ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸುವಲ್ಲಿ ಪೋಷಕರ ಸಹಕಾರ ಅತ್ಯಗತ್ಯವಾಗಿದೆ. ಕರಂದಾಡಿ ಶ್ರೀ ರಾಮ ಹಿ. ಪ್ರಾ. ಶಾಲೆಯಲ್ಲಿ ದಾನಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಆರಂಭಿಸಲಾಗಿರುವ ಆವರ್ತ ಠೇವಣಿ ಸಹಿತವಾದ ವಿವಿಧ ಸೌಲಭ್ಯಗಳನ್ನು ಜೋಡಿಸಿರುವುದು ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವಾಗಿದೆ ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಹೇಳಿದರು. ಆಗಸ್ಟ್ 6ರಂದು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರಣಿ ಸಮಾಜ ಸೇವಾ ಸಂಘ ಕಾಪು ಇವರ ವತಿಯಿಂದ ಆಯೋಜಿಸಲಾದ ಸಮವಸ್ತ್ರ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಮತ್ತು ದಾನಿಗಳ ಸಹಕಾರದೊಂದಿಗೆ ಆವರ್ತ ಠೇವಣಿ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿಗಾಗಿ ಓದು, ಉದ್ಯೋಗಕ್ಕಾಗಿ ಪದವಿ ಎಂಬ ಸಂದಿಗ್ಧಮಯವಾದ ಜೀವನ ಕ್ರಮದಲ್ಲಿ ಮುಳುಗಿರುವ ಇಂದಿನ ಯುವಜನತೆ ನಾವು ಯಾಕೆ ಬದುಕ ಬೇಕು, ಹೇಗೆ ಬದುಕಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಚಿಂತನಾಶೀಲ, ಪ್ರಯತ್ನಶೀಲ ಬದುಕಿಗೆ ಲೀಲಾಧರ ಶೆಟ್ಟಿ ಮಾದರಿಯಾಗಿದ್ದು ಅವರ ಸೇವಾ ಗುಣಗಳು ನಮಗೆಲ್ಲರಿಗೂ ಆದರ್ಶಮಯವಾಗಿದೆ ಎಂದರು. ಸಮ್ಮಾನ ಸ್ವೀಕರಿಸಿದ ಕನ್ನಡ, ತುಳು ಚಿತ್ರನಟ ಪೃಥ್ವಿ ಅಂಬರ್ ಮಾತನಾಡಿ, ಇದೊಂದು ಅತ್ಯಪೂರ್ವ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲೆಡೆ ಸಿಗುವ ಸಮ್ಮಾನ, ಗೌರವಕ್ಕಿಂತ ಹುಟ್ಟೂರಿನಲ್ಲಿ ಸಿಗುವ ಗೌರವಕ್ಕೆ ಹೆಚ್ಚಿನ ಮಹತ್ವವಿದೆ. ಕರಂದಾಡಿ ಶ್ರೀ ರಾಮ ಹಿ.ಪ್ರಾ. ಶಾಲೆಯು ವರ್ಷದಿಂದ ವರ್ಷಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದು ಶಾಲೆಯ ಬೆಳವಣಿಗೆಯಲ್ಲಿ ಎಲ್ಲರೂ ಕೈಜೋಡಿಸುವ ಅಗತ್ಯತೆಯಿದೆ ಎಂದರು.

ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಮಜೂರು ಗ್ರಾ. ಪಂ. ಅಧ್ಯಕ್ಷೆ ಶರ್ಮಿಳಾ ಜೆ. ಆಚಾರ್ಯ, ಪತ್ರಕರ್ತ ರಾಕೇಶ್ ಕುಂಜೂರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಕಾಪು ಶಾಖಾ ಪ್ರಬಂಧಕಿ ಪ್ರಜ್ಞಾ ಜಗದೀಶ್ ಭಂಡಾರಿ, ಪಂಜಿತ್ತೂರುಗುತ್ತು ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ ಶಾನುಭೋಗ್, ಆಡಳಿತ ಮಂಡಳಿ ಸದಸ್ಯ ಶಶಿಶೇಖರ ಭಟ್, ಮುಖ್ಯೋಪಾಧ್ಯಾಯ ಆರ್.ಎಸ್. ಕಲ್ಲೂರ ಮೊದಲಾದವರು ಉಪಸ್ಥಿತರಿದ್ದರು.

ಸಮವಸ್ತ್ರ ವಿತರಣೆ, ಆವರ್ತ ಠೇವಣಾತಿ ಉದ್ಘಾಟನೆ : ಧರಣಿ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. 2021ನೇ ಸಾಲಿನಲ್ಲಿ ಪ್ರವೇಶಾತಿ ಪಡೆದಿದ್ದ 28 ವಿದ್ಯಾರ್ಥಿಗಳಿಗೆ ಆವರ್ತ ಠೇವಣಾತಿ ನೀಡಲಾಗಿದ್ದು, 2022ನೇ ಸಾಲಿನಲ್ಲಿ 29 ವಿದ್ಯಾರ್ಥಿಗಳಿಗೆ ಆವರ್ತ ನಿಽಯ ಠೇವಣಾತಿಯನ್ನು ಹಸ್ತಾಂತರಿಸಲಾಯಿತು. ಪೋಸ್ಟ್ ಮಾಸ್ಟರ್ ಮಲ್ಲಪ್ಪ ಮದರಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು. ದೈಹಿಕ ಶಿಕ್ಷಕ ಎಸ್. ಪ್ರಕಾಶ್ ಸ್ವಾಗತಿಸಿದರು. ಶಿಕ್ಷಕಿ ಸತ್ಯವತಿ ಕಾರ್ಯಕ್ರಮ ನಿರೂಪಿಸಿ, ಲವಿನಾ ಡಿ ಸೋಜ ವಂದಿಸಿದರು.