ಆಗಸ್ಟ್ 7 - 30 : ಉಡುಪಿಯ ಸಾಲಿಡಾರಿಟಿ ಯೂತ್ ಮೂಮೆಂಟ್, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ, ನಶೆ ಮುಕ್ತ ಅಭಿಯಾನ ಸಹಯೋಗದೊಂದಿಗೆ ಮಾದಕ ವಿರೋಧಿ ಅಭಿಯಾನ
Posted On:
10-08-2022 08:04PM
ಕಾಪು : ಇಂದಿನ ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯಗಳ ವ್ಯಸನಕ್ಕೀಡಾಗಿ ಅದರ ದಾಸರಾಗುತ್ತಾರೆ. ಮಾದಕ ದ್ರವ್ಯಗಳ ಕಳ್ಳ ಸಾಗಣಿಕೆದಾರರು ತಮ್ಮ ತಿಜೋರಿಯನ್ನು ತುಂಬಿಸಿಕೊಳ್ಳಲು ದೇಶದ ಯುವಶಕ್ತಿಯನ್ನು ನಶೆಯ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ ಭಂಡಾರಿ ಹೇಳಿದರು.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಡಾ.ಏ.ವಿ.ಬಾಳಿಗ ಮೆಮೊರಿಯಲ್ ಆಸ್ಪತ್ರೆ ಮತ್ತು ನಶಾಮುಕ್ತ ಅಭಿಯಾನ,ಉಡುಪಿ ಜಿಲ್ಲೆ ಹಾಗೂ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇವರು ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಮಾದಕದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ಅಂತರಾಷ್ಟ್ರೀಯ ಸಮಸ್ಯೆ. ಇದರ ಮೂಲೋತ್ಪಾಟನೆಯಾಗಬೇಕು 2019ರ ಅಂಕಿಅಂಶಗಳ ಪ್ರಕಾರ ದೇಶದ ಲ್ಲಿ 2.21%( 2.26 ಕೋಟಿ)ಜನರು ಮಾದಕವಸ್ತುಗಳ ದಾಸರಾಗಿದ್ದಾರೆ. ಇದರಲ್ಲಿ 18 ಲಕ್ಷ ವಯಸ್ಕರು, 4.6ಲಕ್ಷ ಮಕ್ಕಳು ತೀವ್ರ ವ್ಯಸನಿಗಳಾಗಿದ್ದಾರೆ. ಮಾದಕವಸ್ತುಗಳ ಸೇವನೆ ಅಪಾಯಕಾರಿಯಾಗಿದ್ದು ಮನುಷ್ಯನನ್ನು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ಈಡುಮಾಡಿ ಅವನ ಭವಿಷ್ಯ ವನ್ನು ಕಗ್ಗತ್ತಲೆಗೆ ದೂಡುತ್ತದೆ. ಪ್ರಜ್ನಾವಂತ ಯುವಕರು
ಇದರ ವಿರುದ್ಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಮರ ಸಾರಬೇಕು.
ಇಂತಹ ಪ್ರಕರಣಗಳು ಕೇವಲ ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ರಾಜ್ಯ,ದೇಶದೆಲ್ಲೆಡೆ ಹಬ್ಬಿದೆ ಎಂಬ ಕಟುವಾಸ್ತವ ಆತಂಕಕ್ಕೀಡುಮಾಡುತ್ತಿದೆ. ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಉಡುಪಿ ಜಿಲ್ಲೆ, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ, ನಶೆ ಮುಕ್ತ ಅಭಿಯಾನ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಆಗಸ್ಟ್ 7 ರಿಂದ 30 ರ ತನಕ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ವಿಶೇಷ ಉಪನ್ಯಾಸ, ಸಾಮಾಜಿಕ ಜಾಲತಾಣ ಗಳಲ್ಲಿ ಜಾಗ್ರತಿ ಮೂಡಿಸುವ ವೀಡಿಯೋ ಪ್ರಸಾರ, ಕಿರುನಾಟಕ, ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಿತ್ತಿ ಪತ್ರ ವಿತರಣೆ ಮುಂತಾದ ಹಲವಾರು ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಲಿಡಾರಿಟಿ ಅಧ್ಯಕ್ಷ ರಂಜಾನ್ ಕಾಪು, ಸಾಮಾಜಿಕ ಕಾರ್ಯಕರ್ತ ಅನ್ವರ್ ಆಲಿ ಕಾಪು.ಅಡ್ವೊಕೇಟ್ ಅಸದುಲ್ಲ ಕಟಪಾಡಿ, ಯಾಸೀನ್ ಕೋಡಿಬೇಂಗ್ರೆ,ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.