ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ

Posted On: 13-08-2022 10:13PM

ಪಡುಬಿದ್ರಿ : ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಶನಿವಾರ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿಯ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದಲ್ಲಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.

ಪಂಜಿನ ಮೆರವಣಿಗೆಯು ಪಡುಬಿದ್ರಿ ಪೇಟೆಯಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮವನ್ನು ಹಿಂದು ಮುಖಂಡ ಗಣರಾಜ್ ಭಟ್ ಕೆದಿಲ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ತಾಯಿ ಭಾರತಿ ಘೋಷಣೆ, ಕೈಯಲ್ಲಿ ಪಂಜು ಅಖಂಡ ಭಾರತದ ಕಲ್ಪನೆಗೆ ನಾಂದಿ. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಶ್ರಮ, ಬಲಿದಾನ ನಮ್ಮ ಜೀವನಕ್ಕೆ ನಾಂದಿ ಬುನಾದಿ ಎಂಬ ಸತ್ಯ ಸಂಗತಿಯನ್ನು ಅರಿವು ಮಾಡುವುದಕ್ಕೆ ಈ ಅಖಂಡ ಭಾರತ ಸಂಕಲ್ಪ ದಿನ. ಇಂದಿನ ಪಠ್ಯ ಪುಸ್ತಕದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರಿಂದ ಬಂತೆಂದಿದೆ. ಆದರೆ ಈ ಸ್ವಾತಂತ್ರ್ಯ ಯಾರ ಸೊತ್ತು ಅಲ್ಲ. ಇದು ಬ್ರಿಟಿಷರ ಭಿಕ್ಷೆಯಲ್ಲ ನಮ್ಮವರ ರಕ್ತ ಹರಿಸಿ ಗಳಿಸಿದ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದರೆ ಬ್ರಿಟಿಷರೊಂದಿಗಿನ ಹೋರಾಟವೆಂದು ಪಠ್ಯ ಪುಸ್ತಕ ತೋರಿಸುತ್ತದೆ. ಸತ್ಯ ಸಂಗತಿಗಳನ್ನು ಮರೆಮಾಚಲಾಗಿದೆ. ಅದನ್ನು ಲೋಕಕ್ಕೆ ಸಾರ ಬೇಕಾಗಿದೆ. ಇದನ್ನೆಲ್ಲ ನೆನಪಿಸಲು ಅಖಂಡ ಭಾರತ ಸಂಕಲ್ಪ ಎಂದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನಾರಾಯಣ್ ರಾವ್ ಶಿವಾಲಯ, ಶಂಕರ್ ಕಂಚಿನಡ್ಕ, ರಿಕೇಶ್ ಕಡೆಕಾರು, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.