ಪಡುಬಿದ್ರಿ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ತೆಂಕ ಇಲ್ಲಿನ ನೂತನ ಇಂಗ್ಲಿಷ್ ಭಾಷಾ ಕಲಿಕಾ ಕೊಠಡಿಯ ಉದ್ಘಾಟನೆಯನ್ನು ಬಂದರು ಮತ್ತು ಮೀನುಗಾರಿಕಾ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಊರಿನ ಶಾಲೆಯನ್ನು ಕಳೆದುಕೊಂಡಾಗ ಮತ್ತೆ ಪಡೆದುಕೊಳ್ಳುವುದು ಕಷ್ಟ. ಶಾಲೆಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾದರೆ ತರಗತಿವಾರು, ವಿಷಯವಾರು ಶಿಕ್ಷಕರು ಇರಬೇಕು. ಅದು ಆಗದಾಗ ಗುಣಮಟ್ಟದ ಶಿಕ್ಷಣ ಸಾಧ್ಯವಾಗದು. ಇಚ್ಛಾಶಕ್ತಿ, ನಮ್ಮ ಊರಿನ ಶಾಲೆಯೆಂಬ ಅಭಿಮಾನ ಇದ್ದರೆ ನಮ್ಮ ಶಾಲೆಗೆ ನಾವೇ ಸೌಲಭ್ಯಗಳನ್ನು ಹೊಂದಿಸಲು ಸಾಧ್ಯ. ಅಂದಿನ ಜನರ ಮನಸ್ಥಿತಿ ಸಮಾಜಕ್ಕಾಗಿ ನೀಡಬೇಕೆಂಬ ಭಾವನೆಯಿತ್ತು ಆದರೆ ಈಗ ಸರಕಾರ ನೀಡಬೇಕೆಂಬ ಭಾವನೆಯಿದೆ. ಸ್ವಾತಂತ್ರ್ಯ ಬಂದಾಗಿದೆ ಕೊಟ್ಟಂತಹ ಸ್ವಾತಂತ್ರ್ಯ ಉಳಿಸಬೇಕಾದರೆ ನಮ್ಮಲ್ಲಿ ದೇಶಭಕ್ತಿ ಇರಬೇಕು.ಟೀಕೆ ವಿರೋಧಗಳಿಂದ ನಾವು ಯಾವುದನ್ನು ಸಾಧಿಸಲಾಗದು. ಜನರಲ್ಲಿ ದೇಶಭಕ್ತಿಯ ಭಾವ ಉಂಟಾದಾಗ ದೇಶಕ್ಕಾಗಿ ಕೊಡಬೇಕೆನ್ನುವ ಮನಸ್ಥಿತಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ವಹಿಸಿದ್ದರು.
ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೀಲಾ ಕೆ ಶೆಟ್ಟಿ, ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ, ಉಪಾಧ್ಯಕ್ಷೆ ಜಯಶ್ರೀ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಉಮಾ, ಎಸ್ಡಿಎಂಸಿ ಅಧ್ಯಕ್ಷರಾದ ಸೋಮಯ್ಯ, ಶಾಲಾ ಮುಖ್ಯಶಿಕ್ಷಕಿ ವಿನೋದ ಮತ್ತಿತರರು ಉಪಸ್ಥಿತರಿದ್ದರು.