ಆಗಸ್ಟ್ 22 : ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡದಿಂದ ವೇಷ ಧರಿಸಿ ಬಂದ ಹಣವನ್ನು ಆರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ಹಸ್ತಾಂತರ ಕಾರ್ಯಕ್ರಮ
Posted On:
21-08-2022 03:04PM
ಕಟಪಾಡಿ : ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಆರೋಗ್ಯ ಸಮಸ್ಯೆಗೆ ಆರ್ಥಿಕ ಸಹಾಯ ನೀಡಿ ಅವರ ಪಾಲಿಗೆ ಆಶಾಕಿರಣ ಮೂಡಿಸುವಲ್ಲಿ ಶ್ರಮಿಸುವ ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡವು ಶ್ರೀಕೃಷ್ಣ ಜನ್ಮಾಷ್ಟಮಿಯಂದು 4 ನೇ ವರ್ಷದ ವೇಷ ಧರಿಸಿತ್ತು.
ಈ ನಾಲ್ಕನೇ ವರ್ಷದಿಂದ ಬಂದ ಹಣವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವು ಆಗಸ್ಟ್ 22 ರಂದು ಸಂಜೆ 6 ಗಂಟೆಗೆ ಜರಗಲಿದೆ.
ಸಾಮಾಜಿಕ ಸೇವೆಯಲ್ಲಿ ಜೋಕಾಲಿ ಫ್ರೆಂಡ್ಸ್ : ತೆರೆಮರೆಯಲ್ಲಿ ಯಾವುದೇ ಪ್ರಚಾರದ ಹಂಗಿಲ್ಲದೆ ಸಾಮಾಜಿಕ ಕೈಂಕರ್ಯ ಮಾಡುತ್ತಿರುವ ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡದ ಕಾರ್ಯ ಶ್ಲಾಘನೀಯ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕಳೆದ 3 ವರ್ಷದಲ್ಲಿ ವೇಷ ಧರಿಸಿ ಹಲವಾರು ಮಕ್ಕಳ ಚಿಕಿತ್ಸೆಗೆ ಧನಸಹಾಯವಿತ್ತಿದ್ದಾರೆ. ಇದಲ್ಲದೆ ಶ್ರಮದಾನ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣುಮಗಳ ಮದುವೆಗೆ ಮಾಂಗಲ್ಯ ಸಹಾಯ, ಮನೆ ಕಟ್ಟಿಸುವ ಕಾರ್ಯ, ಹಾವು ಹಿಡಿಯುವಿಕೆ, ಶವ ಸಂಸ್ಕಾರದಂತಹ ಕಾರ್ಯಗಳಿಗೆ ಸಹಾಯ, ರಕ್ತದಾನ ಇತ್ಯಾದಿ ಕಾರ್ಯಗಳನ್ನು ಮಾಡಿರುತ್ತಾರೆ.
ಈ ಬಾರಿ ಸಂಗ್ರಹವಾದ ಹಣವನ್ನು ಹೆಜಮಾಡಿಯ ಕಿವಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಸುಮಾರು 18ರಿಂದ 20 ಲಕ್ಷ ವೆಚ್ಚ ತಗಲಲಿರುವ ಮಗುವಿಗೆ ಮತ್ತು ಶಸ್ತ್ರಚಿಕಿತ್ಸೆಗೆ ಅಂದಾಜು 2.50 ಲಕ್ಷ ಬೇಕಾಗಿರುವ ಕಟಪಾಡಿಯ ಕೈ, ಕಾಲು ಶಕ್ತಿ ಕಳೆದುಕೊಂಡಿರುವ ಮಗುವಿಗೆ ನೀಡಲು ಜೋಕಾಲಿ ಫ್ರೆಂಡ್ಸ್ ತಂಡ ಸಿದ್ಧವಾಗಿದೆ.
ಇದರ ಜೊತೆಗೆ ಕೃಷಿಯ ಬಗ್ಗೆ ನಿರಾಸಕ್ತಿ ಮೂಡುವ ಕಾಲಘಟ್ಟದಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ, ವಿದ್ಯಾರ್ಥಿವೇತನ ಕಾರ್ಯಕ್ರಮವು ಜರಗಲಿದೆ. ವೇಷ ಧರಿಸಿ ಸಂಗ್ರಹಿಸಿ ಬಂದ ಹಣದ ಡಬ್ಬಿಯನ್ನು ಆಗಸ್ಟ್ 20, ಆದಿತ್ಯವಾರದಂದು ಸಂಜೆ ಸಾರ್ವಜನಿಕರ ಎದುರು ತೆರೆಯಲಾಗುವುದು ಎಂದು ನಮ್ಮ ಕಾಪುವಿಗೆ ತಿಳಿಸಿದರು.