ಕ್ರಿಯೇಟಿವ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳ ಕೈಗಾರಿಕಾ, ಸಾಂಸ್ಕೃತಿಕ ಭೇಟಿ
Posted On:
25-08-2022 10:36PM
ಕಾರ್ಕಳ : ಕ್ರಿಯೇಟಿವ್ ಪಿ.ಯು ಕಾಲೇಜು, ಕಾರ್ಕಳ ಇದರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಗಸ್ಟ್ 23 ರಂದು ಕೈಗಾರಿಕಾ ಭೇಟಿ ಆಯೋಜಿಸಿತ್ತು.
ಕೈಗಾರಿಕೆಯಲ್ಲಿನ ಹಾಲು ಉತ್ಪಾದನಾ ಘಟಕದ ಪ್ರಕ್ರಿಯೆಗಳು, ಹಂತಗಳು, ಉತ್ಪಾದನಾ ವಿಧಾನಗಳು ಹಾಗೂ ಉತ್ಪನ್ನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಂಗ್ರಹಿಸಿದರು. ಬದುಕಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಪಠ್ಯದಲ್ಲಿನ ವಿಷಯಗಳ ಪ್ರಾಯೋಗಿಕ ಜ್ಞಾನವು ಮಹತ್ತರವಾದದ್ದು ಹಾಗೂ ಒಬ್ಬ ಯಶಸ್ವಿ ಉದ್ಯಮದಾರರನ್ನಾಗಿಸಲು ಸಹಾಯವಾಗಬಹುದು ಎಂಬ ಉದ್ದೇಶದಿಂದ ಈ ಭೇಟಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭ ಹಳೆಯ ಸಂಪ್ರದಾಯಕ ಕೃಷಿ ಮತ್ತು ಕೃಷಿಯೇತರ ಸಲಕರಣೆಗಳನ್ನು ವೀಕ್ಷಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿನ ಗುತ್ತಿನ ಮನೆಗೆ ಭೇಟಿ ನೀಡಲಾಗಿತ್ತು. ಇಲ್ಲಿನ ಹಳೆಯ ಗುತ್ತಿನ ಮನೆ, ದೈವದ ಮೂರ್ತಿಗಳು, ಕತ್ತಿ, ಅಕ್ಕಿಮುಡಿ, ತಿರಿ, ಜನಪದ ಕಲೆಗಳಾದ ಕೋಲ, ಯಕ್ಷಗಾನ ಇವುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್, ಉಮೇಶ್, ಚಂದ್ರಕಾಂತ್, ರಾಜೇಶ್ ಶೆಟ್ಟಿ, ಅಕ್ಷತಾ ಜೈನ್ ಹಾಗೂ ಭೋಧಕೇತರ ವೃಂದದವರು ಪಾಲ್ಗೊಂಡಿದ್ದರು.