ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಅತ್ಯುತ್ತಮ ಕೆಲಸ ಮಾಡಿ, ಇತ್ತೀಚಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ ಆರ್ ಪಾಟ್ಕರ್ ಅವರಿಗೆ ಬಂಟಕಲ್ಲಿನಲ್ಲಿ ಸುಮಾರು 12 ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.
ಆಟೋ ರಿಕ್ಷಾ ಚಾಲಕ ಮಾಲಕ ಸಂಘ, ಅಯ್ಯಪ್ಪ ಭಕ್ತವೃಂದ, ರಾಜಪುರ ಸಾರಸ್ವತ ಯುವ ವೃಂದ, ದುರ್ಗಾ ಚಂಡೆ ಬಳಗ, ಗಣೇಶೋತ್ಸವ ಸಮಿತಿ, ಲಯನ್ಸ್ ಕ್ಲಬ್ ಜಾಸ್ಮಿನ್, ಲಯನ್ಸ್ ಕ್ಲಬ್ ಬಂಟಕಲ್ಲು, ಉಡುಪಿ ಕಿಸಾನ್ ಸಂಘ, ನಾಗರಿಕ ಸಮಿತಿ ಸಹಿತ 12 ವಿವಿಧ ಸಂಘ ಸಂಸ್ಥೆಯಿಂದ ಕೆಆರ್ ಪಾಟ್ಕರ್ ಹಾಗೂ ಅವರ ಧರ್ಮಪತ್ನಿ ಸಂಗೀತ ಪಾಟ್ಕರ್ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಕೆ ಆರ್ ಪಾಟ್ಕರ್ ಮಾತನಾಡಿ, ಜನರ ಪ್ರೀತಿಯಿಂದ ಹೃದಯ ತುಂಬಿ ಬರುತ್ತಿದೆ. ಸದಸ್ಯನಾಗಿ ಮುಂದುವರಿಯುವ ನನಗೆ ಗ್ರಾಮಸ್ಥರ ಸಹಕಾರ ಬೇಕು ಎಂದರು. ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.