ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಗೌರಿ - ಗಣೇಶ : ವಿಲಕ್ಷಣ ತಾಯಿ - ಮಗು

Posted On: 30-08-2022 05:44PM

ಸ್ತ್ರೀ ತನ್ನ ಬಯಕೆಯನ್ನು ಪುರುಷಾವಲಂಬನೆ ಇಲ್ಲದೆ ನೆರವೇರಿಸಿಕೊಳ್ಳುತ್ತಾಳೆ , ಮಗುವನ್ನು ಪಡೆಯುತ್ತಾಳೆ .ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ .ಅಸೂಯೆಗೊಳ್ಳುತ್ತಾನೆ . ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ .ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ . ಆದರೆ ಪ್ರಕರಣ ಸುಖಾಂತ್ಯವಾಗುತ್ತದೆ . ಕತ್ತರಿಸಲ್ಪಟ್ಟ ತಲೆಗೆ ಆನೆಯ ಮುಖ ಜೋಡಿಸಿ ಮಗು ಗಜಾನನನಾಗುತ್ತಾನೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ .ಇದು ಅನಿವಾರ್ಯವಾಗಿ ಅಲ್ಲ , ಪ್ರೀತಿಪೂರ್ವಕವಾಗಿ . ನಿಗ್ರಹಿಸಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ ,ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು .             ಎಷ್ಟೇ ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ ,ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ .ಈ ಪ್ರಪಂಚ ನಿಯಮ‌ ಗಣೇಶನ ಜನನದಲ್ಲಿ‌ ಸಹಜವಾಗಿ ಅನಾವರಣಗೊಳ್ಳುತ್ತದೆ .       ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆ‌ಯ ಸಂಕೇತವಾಗಿ ಗೌರಿ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ.

ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ  ಆದರೆ 'ಅಕಾಲ'ದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ .ಈ ಘಟನೆ ಭೂಮಿ - ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ .          ಬೇಟೆಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಾನವ ಬದುಕಿನ‌ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ .ಇತಿಹಾಸ ಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ .ಅನಂತರ ಇಲಿಯ ಸಾಂಗತ್ಯ ಸಿಗುತ್ತದೆ . ಆದರೆ ಕೃಷಿಯೇ ಪ್ರಧಾನವಾದಾಗ ಗಣಪ ಬಹುವಾಗಿ ಪೂಜಿಸಲ್ಪಡುತ್ತಾನೆ .ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ - ದಾರುಶಿಲ್ಪಗಳಲ್ಲಿ ಲಭ್ಯ. ( ಸಂಗ್ರಹ)      

"ಸಾರ್ಪತ್ಯ ಆವೊಂದಿಪ್ಪೊಡು" : ಜನಪದರ ಹೆಣ್ಣು ಮೈಸಗೆಯನ್ನು‌ ಶಿವ ಪ್ರೀತಿಸುವುದು .ತಾವರೆ ಹೂವಾಗುವುದು . ಗುಟ್ಟಿನಲ್ಲಿ ಜೊತೆಯಾಗುವುದು . ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ "ಸಾರ್ಪತ್ಯ ಆವೊಂದಿಪ್ಪೊಡು" ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ.  ಗಣಪನ ಹೊಟ್ಟೆ : ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ. ಅಕ್ಕಿ - ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ). ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು. ಹೇಗಿದೆ ಜನಪದರ ಕಲ್ಪನೆ.      

ಬೆಣಚುಕಲ್ಲಿನ 'ಬೆನಕ' : ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ‌ : ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ  ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ  ಬೆಣಚುಕಲ್ಲಿನಿಂದ "ಬೆನಕ" ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು .                    ಶ್ರಮ ಸಂಸ್ಕೃತಿ : ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ . ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ . ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ , ಧೂಮ್ರವರ್ಣ , ಕಪ್ಪು - ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ .           ಕೃಷಿ ಸಂಸ್ಕೃತಿ: "ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ" ಭೂಮಿಯ  ಫಲವತ್ತತೆಗಾಗಿ ಸೆಗಣಿ  - ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ .               ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು .                                            (ಓದಿದ್ದು - ಗ್ರಹಿಸಿದ್ದು)                  ಲೇಖನ : ಕೆ.ಎಲ್.ಕುಂಡಂತಾಯ