ಗುರುಪರಂಪರೆಯನ್ನು ಗೌರವಿಸಿ : ಸಚಿವ ವಿ ಸುನಿಲ್ ಕುಮಾರ್
Posted On:
06-09-2022 08:46PM
ಕಾರ್ಕಳ : ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರನ್ನು ಹಾಗೂ ಗುರುಪರಂಪರೆಯನ್ನು ಗೌರವಿಸಿ ಸಂಸ್ಕಾರಯುತ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಯಲ್ಲಿ ಯುವಜನರು ಕೈಜೋಡಿಸುವಂತಾಗಬೇಕೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಕರೆ ನೀಡಿದರು.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ “ಗುರುದೇವೋ ಭವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರಿಯೇಟಿವ್ “ನಿನಾದ” ತ್ರೈಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತಾನಾಡಿದರು. ಪರೀಕ್ಷೆ ಮಾತ್ರ ಜೀವನದಲ್ಲಿ ಮುಖ್ಯವಲ್ಲ, ಅದರಾಚೆಗೂ ವ್ಯಕ್ತಿಗತ ಸಂಸ್ಕಾರ ಬಹಳ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸಿದರು.
ಶಿಕಾರಿಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಸ್ ಶಶಧರ್, ವಿಜೇತ ವಸತಿಯುತ ವಿಶೇಷ ಶಾಲೆಯ ಮುಖ್ಯೋಪಾಧ್ಯಾನಿ ಡಾ. ಕಾಂತಿ ಹರೀಶ್, ನಿವೃತ್ತ ಶಿಕ್ಷಕಿ ತಾರಾ ಕೆ ಹಿರ್ಗಾನ, ಉಪನ್ಯಾಸಕ, ಸಾಹಿತಿ ರಾಘವೇಂದ್ರ ಬಿ ರಾವ್ (ಅನು ಬೆಳ್ಳೆ) ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅನು ಬೆಳ್ಳೆಯವರ 54 ನೇ ಕಾದಂಬರಿ “ಮುಂಬೆಳಕಿನ ತಾರೆ” ಬಿಡುಗಡೆ ಗೊಳಿಸಲಾಯಿತು. ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಡಾ ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ ಕೆ, ವಿಮಲ್‌ರಾಜ್ ಜಿ, ಗಣಪತಿ ಭಟ್ ಕೆ ಎಸ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.