ಕಾಪು : ಮಾನವನ ಜ್ಞಾನವೇ ಯಶಸ್ಸಿನ ಕೀಲಿ ಕೈ - ಮೌಲಾನಾ ಸಲೀಮ್ ಉಮ್ರಿ
Posted On:
11-09-2022 10:42PM
ಕಾಪು : ಶ್ರೀಮಂತರು ಜ್ಞಾನ ಗಳಿಸಲು ಲಕ್ಷಗಟ್ಟಲೆ ಹಣ ವಿನಿಯೋಗಿಸುತ್ತಾನರೆ. ಜ್ಞಾನ ಗಳಿಸುವುದರಲ್ಲಿ ಎರಡು ವಿಧವಿದ್ದು, ಒಂದರಲ್ಲಿ ಸ್ವತಃ ಆತನಿಗೂ ಸಮಾಜಕ್ಕೂ ಯಾವುದೇ ಪ್ರಯೋಜನ ಇರುವುದಿಲ್ಲ. ಆತನು , ತಾನು ಗಳಿಸಿದ ಜ್ಞಾನವನ್ನು ತನ್ನ ಸ್ವಾರ್ಥಕ್ಕಾಗಿ ಬಳಸುತ್ತಾ ಸಮಾಜದಲ್ಲಿ ಕೆಡುಕುಗಳನ್ನು ಹಬ್ಬಿಸಲು ಕಾರಣನಾಗುತ್ತಾನೆ.
ಇನ್ನೊಂದು ವಿಧದ ಗುರಿಯನ್ನು ಇಟ್ಟು ಜ್ಞಾನ ಗಳಿಸಿದವನಿಗೆ ಆತನಿಗೂ, ಸಮಾಜಕ್ಕೂ ಉಪಯೋಗವಾಗುತ್ತದೆ. ಈ ಜ್ಞಾನವನ್ನು ಆತ ಬಳಸುತ್ತಾ, ತನ್ನ ಶಕ್ತಿ, ಸಾಮರ್ಥ್ಯಕ್ಕನುಸಾರವಾಗಿ ಒಳಿತಿನ ಕಾರ್ಯಗಳನ್ನು ಮಾಡುತ್ತಾ,ಅಭಿವೃದ್ಧಿಯನ್ನು ಬಯಸಿ, ದೇವನಿಗೆ ಶರಣಾಗಿ ಸಮಾಜದಲ್ಲಿ ಬದುಕುತ್ತಾನೆ. ಸಮಾಜದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ತಾನು ಈ ಭೂಮಿಗೆ ಬಂದ ಉದ್ದೇಶವೇನು ? ನನಗೆ ಇಲ್ಲಿ ಏನು ಮಾಡಬೇಕಾಗಿದೆ ಎಂಬ ಸಾಮಾನ್ಯ ಜ್ಞಾನ ಇರಬೇಕಾಗಿದೆ. ಈ ಬಗ್ಗೆ ಆತ ಗಾಢವಾಗಿ ಅಧ್ಯಯನ ಮಾಡಬೇಕು. ಯಾವ ರೀತಿ ನಾವು ಲೌಕಿಕ ವಿದ್ಯಾಭ್ಯಾಸ ಗಳಿಸಲು ಬಯಸುತ್ತೇವೆಯೋ ಅದೇ ರೀತಿ ಆದ್ಯಾತ್ಮಿಕ ವಿದ್ಯಾಭ್ಯಾಸ ಗಳಿಸಲು ಮುಂದೆ ಬರಬೇಕು. ಇದರಿಂದ ಅವರ ಇಹ ಮತ್ತು ಪರಲೋಕ ಬೆಳಗುತ್ತದೆ. ಇದೇ ಜ್ಞಾನದ ಯಶಸ್ಸಿನ ಕೀಲಿ ಕೈ ಎಂದು ಶಿವಮೊಗ್ಗ , ಉತ್ತರ ಕನ್ನಡ ವಲಯ ಸಂಚಾಲಕರಾದ ಮೌಲಾನಾ ಮುಹಮ್ಮದ್ ಸಲೀಮ್ ಉಮ್ರಿ ಯವರು ಹೇಳಿದರು.
ಅವರು ಆದಿತ್ಯವಾರ ಕಾಪು ಹೋಟೆಲ್ ಮಂದಾರದಲ್ಲಿ ಎಸ್. ಐ. ಓ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲವು ಹಮ್ಮಿಕೊಂಡ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.
ಇನ್ನೋರ್ವ ಮುಖ್ಯ ಅಥಿತಿ ಎಸ್. ಐ. ಓ ನ ರಾಜ್ಯ ಕಾರ್ಯದರ್ಶಿ ಹಸೀಬ್ ತರಫ್ದಾರ್ ರವರು , ಇಂದು ನಾವು ವಿದ್ಯಾಭ್ಯಾಸ ಪಡೆಯುತ್ತಿರುವಾಗ ಹಲವು ಭಾಷೆ ಕಲಿಯಲು ಪ್ರಯತ್ನಿಸಬೇಕು. ಇದರಿಂದ ನಮ್ಮ ಜ್ಞಾನವು ವೃದ್ಧಿಸುತ್ತದೆ. ಇತಿಹಾಸ ಅಧ್ಯಯನ ಮಾಡುವಾಗ ಭಾಷಾ ಜ್ಞಾನದಿಂದ ಸಮಾಜಕ್ಕೆ ಬಹಳ ಕೊಡುಗೆ ದೊರಕುವಂತಿರಬೇಕು. ಇದು ಇತರರಿಗೆ ಮಾದರಿಯಾಗಿರಬೇಕು ಎಂದರು.
ಹಾಜಿ ಅಬ್ದುಲ್ ಜಲೀಲ್ ಉದ್ಯಾವರ ಸಂದರ್ಭೋಚಿತವಾಗಿ ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಅಬ್ದುಲ್ ಅಜೀಜ್ ಎಮ್. ಐ. ಟಿ ಯವರು ವಹಿಸಿದ್ದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನ ಡಿಪ್ಲೋಮ ಕೋರ್ಸ್ ನಲ್ಲಿ ರಾಜ್ಯದಲ್ಲಿ ಪ್ರಥಮ ರಾಂಕ್ ಗಳಿಸಿದ ಸಮ್ರಿನ್ ಶಹಾಬುದ್ದಿನ್ ರವರಿಗೆ ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್. ಐ. ಓ. ವಿದ್ಯಾರ್ಥಿಗಳಿಗೆ ನಡೆಸಿದ ರಸ ಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿದವರಿಗೆ ನಗದು ಮತ್ತು ಬಹುಮಾನ ನೀಡಲಾಯಿತು. ವಿಜೇತರ ಪಟ್ಟಿಯನ್ನು ಅನ್ವರ್ ಅಲಿ ಕಾಪು ಓದಿದರು.
ಕಾರ್ಯಕ್ರಮವು ಮುಹಮ್ಮದ್ ರಾಯಿಫ್ ರವರ ಕುರಾನ್ ಪಠಣದೊಂದಿಗೆ ಪ್ರಾರಂಭ ಆಯಿತು. ಸ್ವಾಗತ ಮತ್ತು ಪ್ರಾಸ್ತವಿಕ ಭಾಷಣ ಎಸ್. ಐ. ಓ. ಕಾಪು ಘಟಕದ ಅಧ್ಯಕ್ಷ ಅನೀಸ್ ಅಲಿ ಮಾಡಿದರು.
ಬೋರ್ಡ್ ಆಫ್ ಇಸ್ಲಾಮಿಕ್ ನ ನಿಯಮಾವಳಿಯನ್ನು ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಶೇಹೆನಾಜ್ ಕಾಪು ರವರು ಸಭೆಯ ಮುಂದಿಟ್ಟರು.
ಮುಹಮ್ಮದ್ ಅವೀಜ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು.