ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಆಲಸಿಗಳಿಗೆ ಸಲ್ಲದ ಒಲ್ಲದ ಒಲಿಯದ ವಲಸೆ ನಗರಿ ಮುಂಬಯಿ

Posted On: 14-09-2022 09:30PM

ಮುಂಬಯಿಯಲ್ಲಿ ಸಲ್ಲದವ ಎಲ್ಲೂ ಸಲ್ಲನು ಎಂಬ ಮಾತೊಂದು ಜನಜನಿತವಾಗಿದೆ. ಮುಂಬಯಿಯಲ್ಲಿ ಬದುಕನ್ನು ಒಗ್ಗಿಸಿಕೊಳ್ಳದವರು ಪ್ರಪಂಚದ ಯಾವ ಮೂಲೆಯಲ್ಲೂ ಒಗ್ಗಿಸಿಕೊಳ್ಳುವುದು ಕಷ್ಟ ಸಾಧ್ಯ. ಎಂದೂ ಮಲಗದ ನಗರಿ ಮುಂಬೈ ಎಂಥವರಿಗೂ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ತನ್ನಿಂದ ತಾನಾಗಿ ಶಿಸ್ತಿನ, ಕ್ರಮಬದ್ಧವಾದ ದಿನಚರಿಗೆ ಒಗ್ಗಿಸಿ, ಬಗ್ಗಿಸಿ, ದಂಡಿಸಿ, ದುಡಿಸಿಕೊಳ್ಳುವ ಅಗೋಚರ ಶಕ್ತಿ ಸಪ್ತ ದ್ವೀಪಗಳ ನಗರದಲ್ಲಿ ಸುಪ್ತವಾಗಿದೆ. ಪ್ರಥಮ ಸಲ ಮುಂಬೈ ನಗರಿಗೆ ಬಂದವರಿಗೆ ಕಣ್ಣು ಕಟ್ಟಿ ಮೂರು ಸುತ್ತು ತಿರುಗಿಸಿ ಬಿಟ್ಟ ಅನುಭವವಾಗುತ್ತದೆ. ಊರಲ್ಲಿ ಸೂರ್ಯಕಿರಣ ಬೀಳುವ ಬಾವಿಯ ಶುದ್ಧೋದಕ ಕುಡಿದವರಿಗೆ ಮಹಾನಗರದ ಕ್ಲೋರಿನ್ ಮಿಶ್ರಿತ ಕುಡಿಯುವ ನೀರು ಒಂದು ತರ ಘಮಿಸುತ್ತದೆ. ಕುಚ್ಚಲಕ್ಕಿಯ ಅನ್ನ ಉಂಡವರಿಗೆ ಬೆಳ್ತಿಗೆ ಅಕ್ಕಿಯ ಊಟ ರುಚಿಸುವುದಿಲ್ಲ. ಚಾಳ್ ವ್ಯವಸ್ಥೆ ಅಥವಾ ಮ್ಹಾಡದ ವಸತಿ ಸಂಕುಲಗಳಲ್ಲಿ ಅನೇಕ ರಾಜ್ಯದ ವಲಸಿಗರಿರುತ್ತಾರೆ. ನೆರೆಹೊರೆಯಲ್ಲಿ ಉತ್ತರ ಭಾರತೀಯರಿದ್ದರೆ; ಸಾಸಿವೆ ಎಣ್ಣೆಯನ್ನು ನಖಶಿಖಾಂತ ಪೋಸಿಕೊಳ್ಳುವುದು ಮಾತ್ರವಲ್ಲ ಎಲ್ಲ ವ್ಯಂಜನ, ಮೇಲೋಗರಕ್ಕೂ ಉಪಯೋಗಿಸುತ್ತಾರೆ. ಊರಿನಲ್ಲಿ ಶುದ್ಧ ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಉಪಯೋಗಿಸುತ್ತಿದ್ದವರಿಗೆ ಸಾಸಿವೆ ಎಣ್ಣೆಯ ವಿಪರೀತ ಘಮ ನಾಸಿಕವನ್ನು ಹೊಕ್ಕಿ ತಲೆ ಸಿಡಿಯತೊಡಗುತ್ತದೆ. ಘಟ್ಟ ಪ್ರದೇಶದ ಮರಾಠಿಗರು ಇದ್ದರೆ; ಸತಾರಿ, ಪಂಡಾರಪುರಿ ತಂಬಾಕನ್ನು ಸುಟ್ಟು ಹಲ್ಲುಜ್ಜುವ ಮಿಶ್ರಿಯನ್ನು ತಯಾರಿಸುವಾಗ ಬರುವ ಕಟುವಾಸನೆ ಸಹಿಸಲು ಅಸಾಧ್ಯವಾಗುತ್ತದೆ. ಬುಧವಾರ, ಶುಕ್ರವಾರ ಹಾಗೂ ರವಿವಾರಗಳಲ್ಲಿ ಸುಕ್ಕ (ಒಣ) ಬೊಂಬಿಲ್ ಮೀನನ್ನು ಪದಾರ್ಥಕ್ಕಾಗಿ ತವದಲ್ಲಿ ಕರಿಯುವಾಗ ಮೂಗಿನ ಹೊಳ್ಳೆಗಳು ನಲುಗಲಾರಂಭಿಸುತ್ತವೆ.

ಮರಾಠಿ, ಹಿಂದಿ ಬಾರದವರು ರೈಲ್ವೆ ನಿಲ್ಮನೆಗೆ ಬಂದಾಗ; ಬಂದು ಹೋಗುವ ರೈಲುಗಳ ವಿವರಣೆಯ ಉದ್ಘೋಷಣೆಯು ಒಂದು ವಿಶಿಷ್ಟವಾದ ಅನುಭವ ನೀಡುತ್ತದೆ. ಮುಂಬಯಿ ನಗರದ ನಾಡಿಯಾಗಿರುವ ರೈಲು ಪ್ರಯಾಣವು ಒಂದು ವಿಚಿತ್ರಲೋಕವನ್ನೇ ತೆರಿದಿಡುತ್ತದೆ. ಜೀವನ ಪರ್ಯಂತ ಪ್ರಯಾಣಿಸಿದರೂ ನಿತ್ಯವೂ ನೂತನವಾದ ಅನುಭವ. ನೀವು ಉದ್ದವಾಗಿದ್ದರೆ ನೇತಾಡುವ ಸಂಕಲೆಗಳು ತಲೆಗೆ ಬಡಿಯುತ್ತವೆ. ಗಿಡ್ಡವಾಗಿದ್ದರೆ ಜನಜಂಗುಳಿಯಿಂದ ಉಸಿರುಗಟ್ಟುತ್ತದೆ. ತೋರವಾಗಿದ್ದರೆ ಹತ್ತಾರು ಮೊಣಕೈಗಳ ತಿವಿತದ ಅನುಭವವಾಗುತ್ತದೆ. ಎಣ್ಣೆ, ಅತ್ತರು, ಶರಾಬು, ಬೀಡಿ, ಸಿಗರೇಟ್, ಮಾವ, ಗುಡ್ಕ, ಬೀಡಾಗಳ ಸುವಾಸನೆಗಳು ಬೆವರಿನೊಂದಿಗೆ ಬೆರೆತು ಸಂಮಿಶ್ರಣಗೊಂಡು ವಿಚಿತ್ರವಾದ ಮತ್ಯಾವುದೋ ಒಂದು ವಾಸನೆಯಾಗಿ ಮಾರ್ಪಟ್ಟು ವ್ಯಾಪಿಸುತ್ತದೆ. ಈ ಪರಿಮಳಕ್ಕೆ ಶ್ವಾಸದ ಮೇಲಿಟ್ಟ ವಿಶ್ವಾಸವೇ ರೋಧಿಸುತ್ತದೆ. ರೈಲು ಹತ್ತುವ ಮತ್ತು ಇಳಿಯುವ ಕೆಲಸವೂ ಸಾಮಾನ್ಯದಲ್ಲ. ನೀವು ನೀವಾಗಿ ಹತ್ತುವುದಿಲ್ಲ, ಇಳಿಯುವುದಿಲ್ಲ. ಜನಸಮೂಹದ ಒಂದಂಗವಾಗಿರಬೇಕಾಗುತ್ತದೆ. ಇತ್ತೀಚೆಗೆ ಕಡಿಮೆಯಾಗಿರುವ, ಒಂದು ಕಾಲದಲ್ಲಿ ಉದ್ಯೋಗವೇ ಆಗಿದ್ದ ಪಿಕ್-ಪಾಕೆಟ್ ಯಕ್ಷಿಣಿಯಿಂದ ರಕ್ಷಿಸಿಕೊಂಡು ಪ್ರಯಾಣಿಸುವುದು ಹಗ್ಗದ ಮೇಲಿನ ನಡಿಗೆಯಾಗುತ್ತದೆ. ಬಾಗಿಲಲ್ಲಿ ನಿಂತರೆ ಕೈಸೋತು ಕಾಲುಜಾರುವ ಭಯ. ವಿದ್ಯುತ್ ಕಂಬಗಳಿಂದ ರಕ್ಷಿಸಿಕೊಳ್ಳುವ ಸರ್ಕಸ್ ಗೊತ್ತಿರಬೇಕು.

ಏನ್ನೆಲ್ಲ ಸಮಸ್ಯೆಗಳಿದ್ದರೂ, ಅಪವಾದಗಳಿದ್ದರೂ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಬೆವರಿನ ಬೆಲೆ ತಿಳಿದಿದೆ. ಬೆವರು ಹರಿಸಿದರೆ ಕಡೆಗೊಂದು ದಿನ ನೆಲೆಯನ್ನು ಒದಗಿಸುತ್ತದೆ. ದುಡಿಯುವವರ ರಟ್ಟೆಬಲ, ಜಾಣ್ಮೆ, ಮಾತಿನಕಲೆ, ಕ್ರಿಯಾಶೀಲತೆ, ನಾಯಕತ್ವ, ಪರಿಸ್ಥಿಯ ನಿಭಾವಣೆ, ತಾಳ್ಮೆ, ಸಹನೆ, ಪರಿಶ್ರಮಗಳಿಗೆ ಅನುಗುಣವಾದ ಮೌಲ್ಯಮಾಪನವಾಗುತ್ತದೆ. ಅದರಂತೆ ಪ್ರತಿಫಲ ದೊರೆಯುತ್ತದೆ. ಅನಾಮಿಕರಾಗಿದ್ದವರು ಸತ್ಸಮಯದಲ್ಲಿ ಖ್ಯಾತರಾಗುತ್ತಾರೆ. ಬಡವ ಬಲ್ಲಿದನಾಗುತ್ತಾನೆ. ಬಲ್ಲಿದ ಬಳಲಿ ಬಲಗುಂದಿ ಬಡವನಾಗುತ್ತಾನೆ. ನದಿ, ಋಷಿ, ಸ್ತ್ರೀ ಮೂಲಗಳಂತೆ ಹಣದ ಮೂಲವನ್ನು ಮುಂಬಯಿಯಲ್ಲಿ ಯಾರು ಜಾಲಾಡುವುದಿಲ್ಲ. ತಂತಮ್ಮ ಜೇಬಿನ ಭಾರಕ್ಕನುಗುಣವಾದ ಊಟ, ತಿಂಡಿ, ತೀರ್ಥ, ಬಟ್ಟೆಬರೆ, ಸೂರುಗಳು ಲಭಿಸುತ್ತವೆ. ಇಲ್ಲಿ ಕೇವಲ ಎರಡ್ಮೂರು ದೊಡ್ಡ ಬಾಳೆ ಹಣ್ಣು ಅಥವಾ ವಡಪಾವು ತಿಂದು ಬದುಕುವ ಕುಚೇಲರಿಂದ ಹಿಡಿದು ಚಿನ್ನದ ಬಟ್ಟಲು ತಟ್ಟೆಗಳಲ್ಲಿ ಷಡ್ರಸ ಭೋಜನ ಮಾಡುವ ಕುಬೇರರೂ ಇದ್ದಾರೆ. ಅಮ್ಚಿ ಮುಂಬಯಿ ಹಲವಾರು ಅಗ್ನಿ ದಿವ್ಯಗಳಿಗೆ ಒಳಪಟ್ಟಿದೆ. ಭೀಕರವಾದ ಕೋಮು ಗಲಭೆಗಳು, ಭಯಾನಕ ಸರಣಿ ಬಾಂಬ್ ಸ್ಪೋಟಗಳು, ಭಯೋತ್ಪಾದಕರ ದಾಳಿ, ನೆರೆ ಹಾವಳಿ ಇತ್ಯಾದಿಗಳು. ಆದರೆ ಒಂದೆರಡು ದಿನಗಳಲ್ಲಿ ಮುಂಬಯಿ ಸೆಟೆದು ನಿಲ್ಲುತ್ತದೆ. ಬಾಳಿನ ಬಂಡಿ ಹಳಿ ಮೇಲೆ ಓಡತೊಡಗುತ್ತದೆ.

ದಾರಿಹೋಕರ ನೀರಡಿಕೆಗಾಗಿ ಎಲ್ಲ ಹೋಟೆಲುಗಳಲ್ಲಿ ತಾಟು ತುಂಬ ನೀಟಾಗಿ ನಿಲ್ಲಿಸಿದ ಲೋಟಗಳಲ್ಲಿ ನೀರನ್ನು ತುಂಬಿಸಿಡುತ್ತಾರೆ. ರೈಲಿನ ಎರಡನೆ ದರ್ಜೆಯ ಬೋಗಿಯಲ್ಲಿ ಮೂರು ಮಂದಿ ಕೂರುವ ಸೀಟಿನಲ್ಲಿ ನಾಲ್ಕನೆಯವನು ಕುಳಿತುಕೊಳ್ಳ ತಕ್ಕದ್ದು. ದೂರದಿಂದ ಕುಳಿತುಕೊಂಡು ಬಂದವರು ಇಳಿಯಲು ನಾಲ್ಕಾರು ನಿಲ್ದಾಣಗಳು ಇರುವಾಗಲೇ ಎದ್ದು ನಿಂತು ಬೇರೆಯವರಿಗೆ ಕೂರಲು ಅನುವು ಮಾಡ ತಕ್ಕದ್ದು. ಪ್ರಥಮ ದರ್ಜೆ ಬೋಗಿಯಲ್ಲಿ ನಾಲ್ಕನೆಯವನು ಕುಳಿತುಕೊಳ್ಳುವ ಸೌಲಭ್ಯ ಇಲ್ಲವೇ ಇಲ್ಲ. ಬೀಡಾ ಅಂಗಡಿಯಲ್ಲಿ ತಂಬಾಕು ತಿನ್ನುವವರಿಗೆ ಸುಣ್ಣ ಉಚಿತವಾಗಿ ನೀಡ ತಕ್ಕದ್ದು. ಇವೆಲ್ಲ ಒಂದು ರೀತಿಯ ಅಲಿಖಿತ ನಿಯಮಗಳು ಓಬೀರಾಯನ ಕಾಲದಿಂದ ಚಾಲ್ತಿಯಲ್ಲಿವೆ. ಒಟ್ಟಿನಲ್ಲಿ ಮುಂಬಯಿ ಶಿವ ಶರಣರ ವಚನದಂತೆ. ಕಾಯಕವನ್ನೇ ಕೈಲಾಸ ಮಾಡಿಕೊಂಡರೆ ಸಲಹುತ್ತದೆ. ಅಸನಕ್ಕೆ, ವಸನಕ್ಕೆ, ವ್ಯಸನಕ್ಕೆ ಸ್ಪಂದಿಸುತ್ತದೆ. ನೆಲೆಯೂರಲು ಸೆಲೆಯಾಗುತ್ತದೆ. ಪರಿಶ್ರಮವನ್ನು ತ್ಯಜಿಸಿ, ಸದಾ ವಿಶ್ರಾಂತಿಗಾಗಿ ಹಾತೊರೆಯುವ ಆಲಸಿಗರಿಗೆ ಮುಂಬಾ ಮಾತೆ ಒಲಿಯುವುದಿಲ್ಲ. ಪರಿಶ್ರಮಿಗಳ ಕೈ ಬಿಡುವುದಿಲ್ಲ. ಬರಹ : ಉದಯ ಶೆಟ್ಟಿ, ಪಂಜಿಮಾರು