ಪಡುಬಿದ್ರಿ : ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ - ತಮ್ಮಣ್ಣ ಶೆಟ್ಟಿ
Posted On:
22-09-2022 08:42AM
ಪಡುಬಿದ್ರಿ : ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯತೆ ಅತಿಯಾಗಿದ್ದ ಕೇರಳವನ್ನು ಬದಲಾಯಿಸಿದ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಾತ: ಸ್ಮರಣೀಯರು. ಪ್ರಯೋಗ, ಪ್ರತಿಷ್ಟೆ, ಪ್ರವೇಶ ವಿಶೇಷ ತತ್ವವನ್ನು ಪ್ರತಿಪಾದಿಸಿದವರು. ಜಗತ್ತಿನ ಎರಡನೇ ಮತ್ತು ಏಷ್ಯದ ಪ್ರಥಮ ಸರ್ವಧರ್ಮ ಸಮ್ಮೇಳನದ ಆಯೋಜನೆಯ ಖ್ಯಾತಿ ಇವರದ್ದಾಗಿದೆ ಎಂದು ಶಂಭುಗ ಮಾಣಿಕ್ಯ ಬೀಡು, ಕನ್ನಡ ಚಿತ್ರೋದ್ಯಮದ ನಟ ನಿರ್ಮಾಪಕ ತಮ್ಮಣ್ಣ ಶೆಟ್ಟಿ ಹೇಳಿದರು.
ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಪಡುಬಿದ್ರಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕ ಇವರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ
ಬ್ರಹ್ಮಶ್ರೀ ನಾರಾಯಣಗುರುಗಳ 94 ನೇ ಪುಣ್ಯ ತಿಥಿಯಂದು ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು ಎಂಬ ವಿಷಯದ ಉಪನ್ಯಾಸ ನೀಡಿದರು.
ಹಿಂದುವಿನ ಜ್ಞಾನ, ಬುದ್ಧನ ಕರುಣೆ, ಜೀಸಸ್ ನ ಪ್ರೀತಿ, ಮಹಮ್ಮದರ ಸಹೋದರತೆ ಇದು ವಿಶ್ವಧರ್ಮ ಎಂದು ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದರು. ಅಸ್ಪೃಶ್ಯತೆ ಬದಿಗಿರಿಸಿ ಜಗತ್ತಿಗೆ ಬೆಳಕನ್ನು ನೀಡಿದ ಮಹಾನ್ ದಾರ್ಶನಿಕರು ಶಿವಗಿರಿಯಲ್ಲಿ ನಂದಾದೀಪವಾಗಿ ಬೆಳಗಿ ಜಗತ್ತಿಗೆ ಬೆಳಕಾಗಿದ್ದಾರೆ. ನಾರಾಯಣಗುರು ಮತ್ತು ಭೂ ಮಸೂದೆ ಕಾನೂನು ಬರದಿದ್ದರೆ ನಾವೆಲ್ಲರೂ ಪ್ರಾಣಿಗಿಂತ ಕಡೆಯಾಗಿರುತ್ತಿದ್ದೆವು. ಮತಾಂತರವನ್ನು ತಡೆಗಟ್ಟಲು ಶ್ರಮಿಸಿದರು. ನಾರಾಯಣಗುರುಗಳನ್ನು ನಂಬುವ ಬಿಲ್ಲವ ಸಮಾಜ ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದೆ. ಕೇವಲ ಸಣ್ಣ ವೃತ್ತಕ್ಕೆ ಅವರ ಹೆಸರನ್ನು ಸೀಮಿತವಾಗದೆ ಕೇಂದ್ರ, ರಾಜ್ಯಗಳ ವ್ಯವಸ್ಥೆಯ ಭಾಗವಾಗಿ ಅವರ ಹೆಸರು ಶಾಶ್ವತವಾಗಬೇಕು. ಬಿಲ್ಲವ ಸಮಾಜ ಶ್ರೀಮಂತ ವ್ಯವಸ್ಥೆ ಹೊಂದಿದ್ದು, ದೈವಾರಾಧನೆ, ಸಂಧಿ ಪಾಡ್ದನ, ನಾಥ ಪಂಥದಲ್ಲಿಯೂ ಬಿಲ್ಲವರ ಇತಿಹಾಸವಿದೆ. ತುಳುನಾಡಿನ ದೈವಾರಾಧನೆಯಲ್ಲಿ ಪ್ರಮುಖ ಪಾತ್ರ ಬಿಲ್ಲವರದ್ದು, ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿದರು.
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ,
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಡಾ| ಐಶ್ವರ್ಯ, ಬಿಲ್ಲವ ಸಂಘದ ಪದಾಧಿಕಾರಿಗಳು, ದೈವಾರಾಧನೆಯ ಚಾಕರಿಯವರು, ಯುವವಾಹಿನಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣಗುರುಗಳ 94 ನೇ ಪುಣ್ಯ ತಿಥಿಯ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಭಜನೆ ಮತ್ತು ಮಹಾಮಂಗಳಾರತಿ ಸೇವೆಯೂ ಜರಗಿತು.
ನಾರಾಯಣಗುರು ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥಿಸಿದರು. ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಶಾಶ್ವತ್ ಪೂಜಾರಿ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಯಶೋದ ಪ್ರಸ್ತಾವನೆಗೈದರು. ರವಿರಾಜ್ ಎನ್ ಕೋಟ್ಯಾನ್ ಮತ್ತು ಪೂರ್ಣಿಮ ವಿಧಿತ್ ಕಾರ್ಯಕ್ರಮ ನಿರೂಪಿಸಿದರು. ಪಡುಬಿದ್ರಿ ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾದ ಸಂತೋಷ್ ಕರ್ನಿರೆ ವಂದಿಸಿದರು.