ಸೆಪ್ಟಂಬರ್ 26- ಅಕ್ಟೋಬರ್ 5 : ಉಚ್ಚಿಲ ದಸರಾ ಉತ್ಸವ - 2022
Posted On:
22-09-2022 12:10PM
ಉಚ್ಚಿಲ : ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ 26ರಿಂದ ಅ. 5ರ ವರೆಗೆ ನವರಾತ್ರಿಯ ಅಂಗವಾಗಿ ಉಚ್ಚಿಲ ದಸರಾ ಉತ್ಸವ-2022 ಜರಗಲಿದೆ.
ನವರಾತ್ರಿ ಸಂದರ್ಭ ವೈಭವದ ದಸರಾ ಕಾರ್ಯಕ್ರಮ ಜರಗಲಿದ್ದು ಈಗಾಗಲೇ ಎಲ್ಲಾ ಸಿದ್ಧತೆ ನಡೆಯುತ್ತಿದ್ದು ದೇವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಪ ಅಲಂಕಾರ, ನವದುರ್ಗೆಯರ ಮಂಟಪ, ನವ ದುರ್ಗೆಯರ ಮೂರ್ತಿಯೂ ಶಿವಮೊಗ್ಗದ ಕುಬೇರ ಮತ್ತು ತಂಡದ ನೇತೃತ್ವದಲ್ಲಿ ತಯಾರಾಗುತ್ತಿದೆ.
ಉಚ್ಚಿಲ – ಪಡುಬಿದ್ರಿ – ಹೆಜಮಾಡಿ ಟೋಲ್ ಗೇಟ್- ಪಡುಬಿದ್ರಿ -ಉಚ್ಚಿಲ- ಕೊಪ್ಪಲಂಗಡಿ ಕ್ರಾಸ್ ಕಾಪು ಬೀಚ್ ವರೆಗೆ (26 ಕಿ.ಮೀ.)ಶೋಭಾಯಾತ್ರೆನಡೆಯಲಿದ್ದು, ಇದರಲ್ಲಿ ಹುಲಿವೇಷ, ಭಜನ ತಂಡಗಳು ಸಹಿತ 50ಕ್ಕೂ ಹೆಚ್ಚಿನ ಟ್ಯಾಬ್ಲೊಗಳಿವೆ. ಮೆರವಣಿಗೆ ಸಾಗುವ ಕೆಲವು ಕಡೆಗಳಲ್ಲಿ ಸಂಗೀತ ರಸಮಂಜರಿಯೂ ಜರಗಲಿದೆ. ಕೊಪ್ಪಲಂಗಡಿಯಿಂದ ಕಾಪು ಬೀಚ್ ವರೆಗಿನ 4 ಕಿ.ಮೀ. ನಡಿಗೆ ಗಂಗಾರತಿ ಮಾದರಿ ಯಲ್ಲೇ 10 ಬೃಹತ್ ಮಹಾ ಮಂಗಳಾರತಿ ನಡೆಯಲಿದೆ. ದೋಣಿಗಳಲ್ಲಿ ಶಾರದಾ ಮಾತೆ, ನವದುರ್ಗೆಯರ ಪ್ರತಿಮೆಗಳನ್ನು ಸಮುದ್ರದಲ್ಲಿ ಜಲಸ್ತಂಭನ ಮಾಡಲಾಗುವುದು.
ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದಿಂದ ಆಚರಿಸಲಾಗುವುದು. ಪ್ರತಿದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ನಿರ್ಧರಿಸಿದೆ ಎಂದು ದ.ಕ. ಮೊಗವೀರ ಮುಖಂಡ ರಾದ ಡಾ| ಜಿ. ಶಂಕರ್ ಉಚ್ಚಿಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯಸಿ ಕೋಟ್ಯಾನ್ ಬೆಳ್ಳಂಪಳ್ಳಿ ಮಾತನಾಡಿ ದೇವಸ್ಥಾನದ ಪಕ್ಕದಲ್ಲಿ 1.70 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಶಾಲಿನಿ ಡಾ| ಜಿ ಶಂಕರ್ ತೆರೆದ ಸಭಾಂಗಣದ ಲೋಕಾರ್ಪಣೆ ಸೆಪ್ಟೆಂಬರ್ 26ರಂದು ನಡೆಯಲಿದೆ ಅಲ್ಲಿಯೇ ನವ ದುರ್ಗೆರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠೆ ನಡೆಯಲಿದೆ ಎಲ್ಲಾ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ದೇವಸ್ಥಾನದ ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯಾನ್ ಮಾತನಾಡಿ ಎಲ್ಲಾ ತಯಾರಿ ನಡೆದಿದ್ದು ಸಂಭ್ರಮದ ದಸರಾ ವೈಭವದಲ್ಲಿ ಎಲ್ಲರು ಭಾಗವಹಿಸಬೇಕು ತಾಯಿ ಮಹಾಲಕ್ಷ್ಮಿ ಸನ್ನಿಧಾನದಲ್ಲಿ ನಡೆಯುವ ಎಲ್ಲಾ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಮಹಿಳಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಪ್ಪಿ ಸಾಲಿಯಾನ್ ಉಪಸ್ಥಿತಿಯಿದ್ದರು.