ಕಾಪು : ಇಲ್ಲಿನ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರ ಸಹಿತ ೩೫ ಮಂದಿಗೆ ಸನ್ಮಾನ, ವಿವಿಧ ಸ್ಪರ್ಧೆ ಆಯೋಜನೆ, ಬಹುಮಾನ ವಿತರಣೆ ಶುಕ್ರವಾರ ಜರಗಿತು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮಾತನಾಡಿ, ಪೌರ ಕಾರ್ಮಿಕರ ಪ್ರಾಮಾಣಿಕ ಸೇವೆಯಿಂದಾಗಿ ಕಾಪು ಪುರಸಭೆಗೆ ವಿಶೇಷ ಗೌರವ ಸಿಗುವಂತಾಗಿದೆ. ಸಮಾಜದ ಜನರ ಜೊತೆಗಿದ್ದು ಸ್ವಚ್ಛತೆಗಾಗಿ ನಿರಂತರವಾಗಿ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಪೌರ ಕಾರ್ಮಿಕರನ್ನು ಅವಮಾನಿಸದೇ ಅವರನ್ನು ಗುರುತಿಸಿ, ಗೌರವಿಸುವುದೇ ನಾವು ಅವರಿಗೆ ನೀಡಬಹುದಾದ ವಿಶೇಷ ಗೌರವವಾಗಿದೆ ಎಂದರು.
ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪುರಸಭೆಯ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವಿವಿಧ ಮನೋರಂಜನೆ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಶುಭಾಶಂಸನೆಗೈದರು.
ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಸುರೇಶ್ ದೇವಾಡಿಗ, ರತ್ನಾಕರ ಶೆಟ್ಟಿ, ನೂರುದ್ದೀನ್, ಶೈಲೇಶ್ ಅಮೀನ್, ಉಮೇಶ್ ಪೂಜಾರಿ, ಸತೀಶ್ಚಂದ್ರ, ನಾಗೇಶ್, ಸರಿತಾ ಪೂಜಾರಿ, ರಾಧಿಕಾ ಸುವರ್ಣ, ಫರ್ಜಾನ, ಶೋಭಾ ಬಂಗೇರ, ಹರಿಣಾಕ್ಷಿ ದೇವಾಡಿಗ, ವಿದ್ಯಾಲತಾ, ಲತಾ ದೇವಾಡಿಗ, ಮೋಹಿನಿ ಶೆಟ್ಟಿ, ಶಾಬು ಸಾಹೇಬ್, ಸರಿತಾ ಶಿವಾನಂದ್, ಅಧಿಕಾರಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.