ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆ ಅಕ್ರಮ - ಜಿಲ್ಲಾಧಿಕಾರಿಗೆ ದೂರು

Posted On: 07-10-2022 04:20PM

ಪಡುಬಿದ್ರಿ : ಇಲ್ಲಿನ ಎಂಡ್ ಪಾಯಿಂಟ್‌ನಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್‌ನ ಬಹುತೇಕ ಉದ್ಯೋಗಿಗಳು ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ.

ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಹದಗೆಟ್ಟಿದೆ. ಬೋಟಿಂಗ್‌ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಓರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ಮನವಿಗೆ ಸಹಿ ಮಾಡಿರುವ ಅಲ್ಲಿನ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ.

ನಾವು 31 ಮಂದಿ ಉದ್ಯೋಗಿಗಳಿದ್ದು ಸೂಪರ್‌ವೈಸರ್‌ಗಳಿಬ್ಬರು ನಮಗೆ ಜೀವಭಯವನ್ನೂ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ, ಕಳೆದ ಮೂರು ತಿಂಗಳುಗಳಿಂದ ಬ್ಲೂ ಫ್ಲ್ಯಾಗ್ ಬೀಚ್‌ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯವು ಕಾಣಸಿಕೊಂಡಿರುವ ಪರಿಣಾಮ ಇದು. ಸ್ಥಳೀಯರಿಗೇ ಉದ್ಯೋಗ ನೀಡಿದ್ದು, ಮಾಸಿಕ ವೇತನವನ್ನೂ ಸಕಾಲದಲ್ಲಿ ಪಾವತಿಸಲಾಗುತ್ತಿದೆ. ಬೋಟಿಂಗ್, ಪ್ರವೇಶಾತಿಗಳಿಂದ ಬರುವ ಆದಾಯಗಳಿಗೆ ಕ್ರಮವತ್ತಾದ ರಶೀದಿಯನ್ನು ನೀಡಲಾಗುತ್ತಿದೆ. ಆಯಾಯ ದಿನ ಸಂಜೆಯ ವೇಳೆಗೆ ಲೆಕ್ಕಾಚಾರವಾಗಿ ಮರುದಿನವೇ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅಪಸ್ವರವೆತ್ತಿರುವ ಉದ್ಯೋಗಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಬೋ ತಿಳಿಸಿದ್ದಾರೆ.