ಉಚ್ಚಿಲ : ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ ; ದೂರು ದಾಖಲು
Posted On:
09-10-2022 04:40PM
ಉಚ್ಚಿಲ : ಇಲ್ಲಿನ ಸಮೀಪದ ಎಲ್ಲೂರು ಗ್ರಾಮದ ಹಾಡಿಯಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ವಿವಾಹಿತ ಗೃಹಿಣಿಯ ಮೃತದೇಹ ರವಿವಾರ ಪತ್ತೆಯಾಗಿದ್ದು ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಎಲ್ಲೂರು ಗ್ರಾಮದ ರಕ್ಷಿತಾ(24) ಮೃತಪಟ್ಟ ಮಹಿಳೆ. ಉಡುಪಿಯ ಫ್ಯಾನ್ಸಿಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಅವರು ತಮ್ಮ ಸಹೋದ್ಯೋಗಿ ಸಂಜಯ ಆಚಾರಿ ಎಂಬಾತನೊಂದಿಗೆ 2 ವರ್ಷದ ಹಿಂದೆ ಮದುವೆ ಆಗಿದ್ದರು.
ನಂತರ ರಕ್ಷಿತಾಳ ತಾಯಿಗೆ ಹುಷಾರಿಲ್ಲದ ಕಾರಣ ಕಾಪುವಿನ ಎಲ್ಲೂರು ಕಂಚುಗಾರ ಕೇರಿ ಎಂಬಲ್ಲಿರುವ ತಾಯಿ ಮನೆಗೆ ಬಂದು ಗಂಡ ಹಾಗೂ ತಂದೆ ತಾಯಿಯೊಂದಿಗೆ ವಾಸವಾಗಿದ್ದರು.
ಈ ನಡುವೆ ರಕ್ಷಿತಾಳ ಗಂಡ ಸಂಜಯ್ ಹಾಗೂ ಅವರ ಜೊತೆ ಕೆಲಸ ಮಾಡುವ 3 ಜನ ಹುಡುಗಿಯರೊಂದಿಗೆ ರಕ್ಷಿತಾ ಅವರ ದೊಡ್ಡಮ್ಮನ ಮಗಳು ಶಕುಂತಳ ಎಂಬವರವರ ಮನೆಗೆ ಬಂದು ರಕ್ಷಿತಾಳ ನಡತೆ ಸರಿ ಇಲ್ಲ ಎಂಬುದಾಗಿ ತಿಳಿಸಿ, ರಕ್ಷಿತಾ ಅವರನ್ನು ಅಲ್ಲಿಯೇ ಬಿಟ್ಟು ನಂತರ ಅದೇ ದಿನ ಸಂಜೆ ಬಂದು ಕರೆದುಕೊಂಡು ಹೋಗಿದ್ದ.
ಆ ನಂತರ ರಕ್ಷಿತಾ ಅವರ ಆರೋಗ್ಯ ವಿಚಾರಿಸಲು ಶಕುಂತಳ ಅವರು ಸಂಜಯ್ ಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸದೇ ಪತ್ನಿ ಯಾರೊಂದಿಗೋ ಹೋಗಿರಬೇಕು ಎಂದು ಉತ್ತರಿಸಿದ್ದಾನೆ.
ಅಲ್ಲದೆ ಈ ವೇಳೆ ರಕ್ಷಿತಾ ಅವರನ್ನು ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಆದರೆ ಅ.8 ರ ಸಂಜೆ ವೇಳೆ ಎಲ್ಲೂರು ಗ್ರಾಮದ ದಿ. ಪೊಲ್ಲಶೆಟ್ಟಿ ಎಂಬುವರ ಹಾಡಿಯಲ್ಲಿರುವ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾ ಅವರ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅದರಂತೆ ರಕ್ಷಿತಾ ಅವರು ಪಾಳು ಬಾವಿಗೆ ಬಿದ್ದಿರುವ ಅಥವಾ ಅವರನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆಯು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದ್ದು, ರಕ್ಷಿತಾರ ಮರಣದ ಬಗ್ಗೆ ಅವಳ ಗಂಡ ಸಂಜಯ ಆಚಾರಿಯ ಮೇಲೆ ಸಂಶಯವಿರುವುದಾಗಿ ಶಕುಂತಳಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.