ಕಾಪು: ನಿವೃತ್ತ ಯೋಧ ಮೂಳೂರು ನಿವಾಸಿ ಹಾಜಿ ಅಬ್ದುಲ್ ರಝಾಕ್ ಶಾಬಾನ್ ನಿಧನ
Posted On:
12-10-2022 06:01PM
ಕಾಪು : ನಿವೃತ್ತ ಯೋಧ ಮೂಳೂರು ನಿವಾಸಿ ಹಾಜಿ ಅಬ್ದುಲ್ ರಝಾಕ್ ಶಾಬಾನ್ (85) ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು.
18ನೇ ವಯಸ್ಸಿನಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ಅಬ್ದುಲ್ ರಝಾಕ್ ಶಾಬಾನ್ ಅವರು ಎರಡು ವರ್ಷ ಬೆಂಗಳೂರಿನ ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದು ಬಳಿಕ ಕಮ್ಯುನಿಕೇಶನ್ ಆಫಿಸರ್ ಆಗಿ ಕಾರ್ಯನಿರ್ವಹಿಸಿದ್ದರು.
ವಾಯುಸೇನಾ ಕಾಲಾವಧಿಯಲ್ಲಿ ದೆಹಲಿ, ಆಗ್ರಾ ಹಾಗೂ ಹಿಮಾಲಯದ ತಪ್ಪಲಿನ ಲಡಾಖ್ ಸೇನಾ ನೆಲೆಯಲ್ಲೂ ಕಾರ್ಯಾಚರಣೆ ನಡೆಸಿದ್ದರು. 1962ರ ಚೀನಾ ಯುದ್ಧ 1965ರ ಪಾಕಿಸ್ತಾನ ಯುದ್ಧ ಹಾಗೂ 1971ರ ಪಾಕಿಸ್ತಾನದ ವಿರುದ್ಧ ಸಮರ ಸೇನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಮೆಡಲ್‌ಗಳಿಂದ ಪುರಸ್ಕೃತರಾದರು.
1975ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ನಂತರ ಧಾರ್ಮಿಕ ಸೇವಾರಂಗದಲ್ಲಿ ತೊಡಗಿಸಿಕೊಂಡಿದ್ದರು. ಮೂಳೂರಿನ ಮಸೀದಿಯ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮೂರು ಭಾರಿ ಮದ್ರಸದ ಹಾಗೂ ಒಂದು ಭಾರಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕೊಡುಗೈ ದಾನಿಯೂ ಆಗಿದ್ದ ಇವರು ತಂದೆಯ ಹೆಸರಿನಲ್ಲಿ ಮುಹಮ್ಮದ್ ಶಾಬಾನ್ ಟ್ರಸ್ಟ್ ಸ್ಥಾಪಿಸಿ ಅಶಕ್ತ ಕುಟುಂಬಗಳಿಗೆ ಧನಸಹಾಯ ನೀಡುತ್ತಿದ್ದರು. ಹಾಜಿ ಅಬ್ದುಲ್ ರಝಾಕ್ ಶಾಬಾನ್ ಅವರು ಪತ್ನಿ, ಗಂಡು ಮಕ್ಕಳು, ಬಂಧುಬಳಗವನ್ನು ಅಗಲಿದ್ದಾರೆ.