ಕಾಂತಾರ ತುಳುನಾಡಿನ ದೈವಾರಾಧನೆಯನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸಿದೆ. ಆದರೆ....!
Posted On:
13-10-2022 11:39PM
" ಕಾಂತಾರ " ಇಂದು ಜಗತ್ತಿನಾದ್ಯಂತ ತುಂಬಿರುವ ತುಳು ಕನ್ನಡಿಗರ ವಲಯದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಂತಹ ದೈವ ಆಧಾರಿತ ಚಲನ ಚಿತ್ರ. ತುಳುನಾಡಿನ ಜನತೆಗೆ "ದೈವ"ಮೊದಲು "ದೇವರು"ನಂತರ ಎಂಬ ಮೂಲ ನಂಬಿಕೆಗೆ ಸಂಪೂರ್ಣವಾಗಿ ಶರಣಾದಂತಹ ಸತ್ಯ ಸಂಕಲ್ಪ. ಅದಕ್ಕಾಗಿಯೇ ತುಳುವರು "ದೈವ ದೇವೆರೇ " ಎಂದು ಕರೆಯುವುದೇ ಅವರ ಮಹಾಮಂತ್ರ ಎಂದರೆ ತಪ್ಪಾಗಲಾರದು. ಭಯದ ಅಡಿಯಲ್ಲಿ ಭಕ್ತಿಯನ್ನು ಪಾಲಿಸಿಕೊಂಡು ಬಂದಿರುವ ಏಕೈಕ ಸಂಪ್ರದಾಯ ನಮ್ಮ ತುಳುವರದ್ದು. ದೈವ ಎಂಬುವುದು ಒಂದು ಕುಟುಂಬಕ್ಕೆ ಮಾವ (ತಮ್ಮಲೆ)ನಂತೆ ಎಂದೂ ಹೇಳುತ್ತಾರೆ .ತುಳುವರು ತಾಯಿ ತಂದೆಯ ಮೇಲೆ ಅಪಾರ ಭಕ್ತಿಯನ್ನು ತೋರಿಸಿ ಮಾವನಿಗೆ ತುಂಬಾ ಹೆದರುವ ಗೌರವ ಕೊಡುವ ನಮ್ಮ ಸಂಸ್ಕ್ರತಿ.ಹಾಗಾಗಿ ದೇವರು ಸಲಹುವವನಾದರೆ ನಾವು ಧರ್ಮ ತಪ್ಪಿದಲ್ಲಿ ದಂಡಿಸುವ ಮತ್ತು ತಿದ್ದುವ ಕೆಲಸವನ್ನು ಮಾವ(ತಮ್ಮಲೆ ) ನ ಸ್ಥಾನದಲ್ಲಿ ನಿಂತು ದೈವಗಳೆ ಮಾಡುವುದು ಎಂಬುವುದನ್ನು ಬಲವಾಗಿ ನಂಬಲೇ ಬೇಕಾದ ವಿಚಾರ.
ಈಗ ನಾವು ಕಾಂತಾರ ಸಿನಿಮಾದ ಬಗ್ಗೆ ದೃಷ್ಟಿ ಹರಿಸೋಣ !
ಕಾಂತಾರ ಸಿನಿಮಾದ ಕಥೆ ಒಂದು ದಂತಕಥೆಯಾಗಿ ತೆರೆಯ ಮೇಲೆ ಬಂದಿರುವುದು ಎಷ್ಟು ಸರಿ.ಎಷ್ಟು ತಪ್ಪು ಎಂಬುದನ್ನು ಹೇಳಲು ದೈವ ಚಿಂತಕರಿಂದ ಮಾತ್ರ ಸಾಧ್ಯ. ಆದರೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ತುಳುವರನ್ನು ಈ ಒಂದು ಸಿನೆಮಾ ಬಡಿದು ಎಬ್ಬಿಸಿದ್ದಂತೂ ನೂರಕ್ಕೆ ನೂರು ಸತ್ಯ ತುಳುವನ ದೇಹದ ರಕ್ತದಲ್ಲಿ ಒಂದು ದೈವ ಸಂಚಾರವನ್ನೇ ಮೂಡಿಸಿದೆ. ಅಲ್ಲದೆ ತುಳುನಾಡಿಗೆ ಕೋರ್ಟು ಕಚೇರಿ ಕಾನೂನಿಗಿಂತಲೂ ದೈವದ ತೀರ್ಪೇ ಮೇಲು ಎಂಬ ಸತ್ಯ ಸಂದೇಶವನ್ನು ಈ ಸಿನೆಮಾ ನೀಡಿದೆ.
ಸಿನಿಮಾದ ಒಂದು ದೃಶ್ಯದಲ್ಲಿ: ಗುರುವ ಎಂಬ ದೈವದ ಚಾಕರಿ ಮಾಡುವವನ ಕೊಲೆಯಾದಾಗ .ಜೈಲಲ್ಲಿರುವ ನಾಯಕ ನಟ ಶಿವನಿಗೆ ತನ್ನ ಮನೆಯವರಿಂದ ಸುದ್ದಿ ಮುಟ್ಟುವ ಮೊದಲು.ಜೈಲಿನ ವರಾಂಡದಲ್ಲಿ ದೈವ ಕುಳಿತು ಕಣ್ಣೀರು ಹಾಕಿ ತನ್ನ ಚಾಕರಿಯವನ ಕೊಲೆಗೆ ಸಂತಾಪಗೊಂಡು ರೋಧಿಸುವ ಸನ್ನಿವೇಶ ನಿಜವಾಗಿಯೂ ದೈವ ಭಕ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಬರುವುದಂತೂ ಖಂಡಿತ.ತನ್ನ ಚಾಕರಿ ಮಾಡುವವನನ್ನು ದೈವ ಎಷ್ಟೊಂದು ಪ್ರೀತಿಸುತಿದೇ ಎಂಬುದನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರದ ಕೊನೆ ಘಳಿಗೆಯಲ್ಲಿ ದೈವದ ಅಧೀನ ದಲ್ಲಿರುವ ಜಾಗ ದೈವದ ಸುಪರ್ದಿಗೆ ಸೇರಲು ಶ್ರಮಿಸಿದ ಪೊಲೀಸ್ ಅಧಿಕಾರಿಯನ್ನು ದೈವ ತನ್ನ ಕೈ ಭಾಷೆಯಲ್ಲಿ ಕರೆದು ಅಧಿಕಾರಿಯ ಕೈಯನ್ನು ತನ್ನ ಎದೆಗೆ ಒತ್ತಿ ಮುದ್ದಾಡಿ ತನ್ನ ಸಂತಸವನ್ನು ವ್ಯಕ್ತ ಪಡಿಸುವ ದೃಶ್ಯವಂತೂ ತುಂಬಾ ಹೃದಯ ಕರಗುವಂತಿತ್ತು.ದೈವಕ್ಕೆ ತನ್ನನ್ನು ನಂಬಿಕೊಂಡು ಬದುಕುವವರು ಧರ್ಮದ ಹಾದಿಯಲ್ಲಿ ಬದುಕುವಂತಾದರೆ ಅದರಷ್ಟು ಖುಷಿ ದೈವಕ್ಕೆ ಬೇರೊಂದಿಲ್ಲ ಅನ್ನಬಹುದು ಅಲ್ಲವೇ !!
ಒಂದು ಆದ್ಯಾತ್ಮಿಕ ಹಾದಿಯಲ್ಲಿ ಹೋಗುವ ಈ ಚಿತ್ರದ ನಡುವೆ ನಾಯಕ ನಟ ನಟಿಯರ ಪ್ರಣಯಕ್ಕೆ ಸಂಬಂಧಿಸಿ ಹಾಕಿದ ಮಸಾಲ ಹಾಗೂ ಸಾಹುಕಾರನ ಅನೈತಿಕ ಸಂಬಂಧ ನಡೆಯುತ್ತಿರುವಾಗ ಕಾದು ಕುಳಿತ ಶಿವನಿಗೆ ಅಲ್ಲಿ ದೈವ ಕಣ್ಣ ಮುಂದೆ ಬಂದಂತಾದಾಗ ಸಾಹುಕಾರ ಹೆದರಿ ತನ್ನ ಬಟ್ಟೆ ಯನ್ನು ಕೈಯಲ್ಲಿ ಹಿಡಿದು ಓಡುವ ದೃಶ್ಯ ಕಮರ್ಷಿಯಲ್ ದೃಷ್ಟಿ ಯಿಂದ ಒಪ್ಪಬೇಕೆ ವಿನಃ ಅದನ್ನು ಬೇರೆ ರೀತಿಯಲ್ಲಿ ತೋರಿಸುತ್ತಿದ್ದರೆ ಇನ್ನೂ ಭಕ್ತಿ ಪೂರ್ವಕವಾಗಿ ಮೂಡಿ ಬರುತ್ತಿತ್ತು..ಯಾಕೆಂದರೆ ತುಳು ಮಾತನಾಡಲು ಬರುವ ಕನ್ನಡ ಬಾರದ ಮಕ್ಕಳಿಗೆ ದೈವದ ಭಕ್ತಿಯ ಹಾದಿಯಲಿ ನಡೆಯುವ ದೃಶ್ಯಗಳ ನಡುವೆ ಇಂತಹ ದೃಶ್ಯ ಬಂದಾಗ ಸ್ವಲ್ಪ ಗೊಂದಲ ಮೂಡಿಸಿರುವುದು ಸತ್ಯ ದರ್ಶನ...ಕ್ಷಮಿಸಿ
ಇಂತಹಾ ಸಿನೆಮಾ ಇಷ್ಟರ ತನಕ ಬಂದಿಲ್ಲ!
ಇನ್ನು ಮುಂದೆ ಬರಕೂಡದು !... ಇದೇ ಮೊದಲು ಇದೇ ಕೊನೆಯಾಗಲಿ..............................ಯಾಕೆ???
ಯಾಕೆಂದರೆ!!!ಇವತ್ತು ಒಂದು ಪಂಜುರ್ಲಿ ದೈವ ಮತ್ತು
ಅದಕ್ಕೆ ಸೇರಿದ ಜಾಗವನ್ನು ಆಧಾರವಾಗಿಟ್ಟುಕೊಂಡು ಒಂದು ಕತೆ ನಿರ್ಮಿಸಿ. ದೈವಾರಾಧನೆಯನ್ನು ತೆರೆಯ ಮೇಲೆ ತೋರಿಸಿ .ಜನಮನ ಹಣ ಗೆದ್ದ ನಿರ್ಮಾಪಕರು ಉತ್ಸಾಹದಿಂದ ನಾಳೆ ಇದರ ಮುಂದುವರಿದ ಭಾಗ ಕಾಂತಾರ -2 ಬಂದರೂ ಬರಬಹುದು.ಅಥವಾ ಇಂತಹ ಸಿನಿಮಾದಿಂದ ಪ್ರೇರಿತಗೊಂಡ ಕನ್ನಡ ತುಳು ಚಿತ್ರ ನಿರ್ಮಾಪಕರು ಮುಂದಿನ ಕತೆಗಳಲ್ಲಿ ಜುಮಾದಿ ಜಾರಂದಾಯ ಕೊರಗಜ್ಜಾ ಮುಂತಾದ ಕಾರ್ಣಿಕದ ಕ್ಷೇತ್ರಗಳ ಕತೆ ಸೃಷ್ಟಿಸಿ ಕೋಲ ನೇಮ ತಂಬಿಲದ ಕೆಲವೊಂದು ದೃಶ್ಯಗಳನ್ನು ಕತೆಗೆ ಬಂಡವಾಳವನ್ನಾಗಿಸಿ ಹಣ ಮಾಡುವ ದಂಧೆ ಶುರು ಆದರೂ ಆಗಬಹುದು..ದೈವ ನರ್ತನ ಆರಾಧನೆಯನ್ನು ಬೇಕಂತಲೇ ಸ್ವಲ್ಪ ವಿರೂಪಗೊಳಿಸಿ ಚಿತ್ರವನ್ನು ವಿರೋಧಿಸುವಂತೆ ಅವರೇ ಮಾಡಿ ಪ್ರಚಾರ ಪಡೆದು ಸಿನಿಮಾವನ್ನು ಗೆಲ್ಲಿಸುವ ಕೆಟ್ಟ ಪ್ರಜ್ಞೆ ಬಂದರೂ ಆಶ್ಚರ್ಯವಿಲ್ಲ.... ಹಿಂದೂ ಧರ್ಮದ ದೇವರುಗಳನ್ನು ಕೆಟ್ಟದಾಗಿ ತೋರಿಸಿ ಸಿನಿಮಾ ಮಾಡಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.ಯಾಕೆಂದರೆ ಕೆಲವೊಂದು ನಿರ್ಮಾಪಕರಿಗೆ ತನ್ನ ಜನಪ್ರಿಯತೆ ಹಾದಿ ತಪ್ಪಿಸುವುದರಲ್ಲಿ ಸಂಶಯವಿಲ್ಲ..
ತುಳುನಾಡಿನ ದೈವ ಮತ್ತು ಆರಾಧನೆಯನ್ನು ತೆರೆಯ ಮೇಲೆ ಭಯವಿಲ್ಲದೆ ತೋರಿಸಿ ಮುಂದಿನ ದಿನಗಳಲ್ಲಿ ಕೋಲ ನೇಮ ಗಳನ್ನೂ ತೆರೆಯ ಮೇಲೆ ಮಾತ್ರ ನೋಡುವ ಕಾಲ ಬಂದರೂ ಬರಬಹುದು.....ಇವತ್ತು ಕಾಂತಾರ ಸಿನೆಮಾದಲ್ಲಿ ಬರುವ ಕೋಲದ ದೃಶ್ಯ ಕಂಡು ಭಾವೋದ್ರೇಕರಾಗಿ ಕೈ ಮುಗಿಯುವುದು ಅದನ್ನು ನೋಡಿ ಭಕ್ತಿಪರವಶ ವಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅದು ನಮ್ಮ ದುರಾದೃಷ್ಟ ಎಂದೆಣಿಸಿಕೊಳ್ಳ ಬಹುದು....!!
ದೈವ ಕಾರ್ಣಿಕಗಳನ್ನು ನಮ್ಮ ಭಯ ಭಕ್ತಿಯ ಮೂಲಕ ನಮ್ಮ ಮಣ್ಣಿನಲ್ಲಿಯೇ ಆರಾಧಿಸಿಕೊಂಡು ಅದನ್ನು ಅನುಭವಿಸಬೇಕೇ ವಿನಃ. ..ಸಿನಿಮಾದಲ್ಲಿನ ಕ್ರಿಯೇಟಿವ್ ಥಿಯೇಟರಿನ ಸೌಂಡ್ ಎಫೆಕ್ಟ್ ಗಳಿಗೆ ರೋಮಾಂಚನಗೊಂಡು ಭಕ್ತಿ ಪರವಶಗೊಳ್ಳುವುದು ನಿಜವಾದ ದೈವ ಭಕ್ತಿ ಅಲ್ಲವೇ ಅಲ್ಲ...ತುಳುನಾಡಿನ ದೈವ ದೇವರುಗಳ ಆರಾಧನೆಯನ್ನು ತುಳುವರ ಮುಂದಿನ ಪೀಳಿಗೆಗೆ ತಿಳಿಸುವಂತಾಗಲು .. ಕೋಲ ಧರ್ಮ ನೇಮಗಳಂತಹ ಕಾರ್ಯಗಳನ್ನು. ನಮ್ಮ ನೆಲದಲ್ಲಿಯೇ ಮಾಡಿ.ವಾದ್ಯ ಪಾರ್ಧನ ದೈವ ನರ್ತನಗಳನ್ನು ನಿಜ ಕಣ್ಣಿನಿಂದ ನೋಡಿ ಭಯ ಭಕ್ತಿಯನ್ನು ತುಂಬಿಸಿ ಕೊಂಡರೆ ಖಂಡಿತವಾಗಿಯೂ ದೈವ ದೇವರುಗಳ ಕಾರ್ಣಿಕಗಳನ್ನು ನಿಜ ಜೀವನದಲ್ಲಿ ಅನುಭವಿಸಬಲ್ಲಿರಿ !! ಸಿನಿಮಾ ನೋಡಿ "ಸೌಂಡ್ ಎಫೆಕ್ಟ್ ಗೆ ಭಯ ಭಕ್ತಿ ಬಂದಲ್ಲಿ ದೈವದ ಕಾರ್ಣಿಕ ಖಂಡಿತಾ ಅನುಭವಿಸಲಾರಿರಿ.....ಅಲ್ಲದೆ ಅದರಿಂದ ವಿಘ್ನವೇ ಹೆಚ್ಚು
ಈ ಒಂದು ಸಿನೆಮಾ ಕೆಲವರನ್ನು ಎಚ್ಚರಿಸುವ ಸಲುವಾಗಿ ದೈವ ಸಂಕಲ್ಪದಿಂದ ಭರ್ಜರಿ ಯಶಸ್ಸು ಕಂಡಿದೆ ಮಾತ್ರವಲ್ಲದೆ ಇನ್ನು ಮುಂದೆ ಇಂತಹ ಸಿನಿಮಾವನ್ನು ತಯಾರಿಸಿದರೆ ಯಶಸ್ಸು ಬಿಡಿ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಮಸ್ಯೆ ಬರಲಿದೆ....ನಿಮಗೆ ತಿಳಿದಿರಲೂ ಬಹುದು ಕೋಟಿ ಚೆನ್ನಯ ಪ್ರಥಮ ಬ್ಲಾಕ್ ಆಂಡ್ ವೈಟ್ ಸಿನಿಮಾವನ್ನು ಕೂರ್ಕಾಲ್ ಗರಡಿಯಲ್ಲಿ ಚಿತ್ರೀಕರಣ ಮಾಡಿದಾಗ ಮತ್ತು ಬಿಡುಗಡೆಗೊಂಡ ನಂತರ ನಟಿಸಿದ ನಟರಿಗೆ ಹಲವಾರು ಸಮಸ್ಯೆಗಳು ಬಂದಿರುವುದನ್ನು ನಾನು ಸಣ್ಣ ವಯಸ್ಸಿನಲ್ಲಿ ಕೇಳಿದ ನೆನಪು...ಆಪ್ತ ಮಿತ್ರದಂತಹ ಕನ್ನಡ ಸಿನೆಮಾದಲ್ಲೂ ಸಮಸ್ಯೆ ಕಂಡುಬಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು....
ಎಚ್ಚರಿಕೆ ನಿರ್ಮಾಪಕರೇ ತುಳು ನಾಡಿನ ದೈವಗಳು ಇದಕ್ಕಿಂತಲೂ ಭಯ ಭಯಂಕರ
!!ಆಯೆ ಬುಡಿಯೆಡಲಾ ಯಾನ್ ಬುಡಯೆ!!
ಈ ದೈವ ನುಡಿ ನೆನಪಿರಲಿ
ನನ್ನ ಆಲೋಚನೆ ತಪ್ಪಿದ್ದರೆ ಕ್ಷಮೆ ಇರಲಿ
ಬರಹ : ಚಂದ್ರಕೃಷ್ಣ ಶೆಟ್ಟಿ ಬೆರ್ಮೊಟ್ಟು
ಇನ್ನಂಜೆ ( ಕಾಪುದಾರ್ )