ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತೆಂಕ ಎರ್ಮಾಳು : ಕಳ್ಳತನ ಮಾಡಿ ಸ್ಕೂಟರ್ ಬಿಟ್ಟು ಪರಾರಿಯಾದ ಕಳ್ಳ

Posted On: 16-10-2022 08:10PM

ಎರ್ಮಾಳು : ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ. ತೆಂಕ ಎರ್ಮಾಳು ಅಯೆಶಾ ಇಬ್ರಾಹಿಂರವರ ಬಾಡಿಗೆ ರೂಮ್ ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ ಗೆ ಬೀಗ ಹಾಕಿ ಊರಿಗೆ ತೆರಳಿದ್ದರು.

ಭಾನುವಾರ ಮುಂಜಾನೆ 5:30ರ ಸುಮಾರಿಗೆ ಮನೆಗೆ ಬಂದಾಗ, ಮಂದ ಬೆಳಕಿನಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬರು ನಿಂತಿದ್ದು, ಇವರನ್ನು ಕಂಡು ತಾನು ತಂದಿದ್ದ ಸ್ಕೂಟರ್ ಬಿಟ್ಟು ಪಲಾಯನ ಮಾಡಿದ್ದಾನೆ. ರೂಮ್ ನ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಸಣ್ಣ ಪುಟ್ಟ ಮಕ್ಕಳ ಆಭರಣ ಸಹಿತ ಇಪ್ಪತ್ತು ಸಾವಿರ ನಗದು, ಹೊಸ ಪಾತ್ರೆಗಳು ಸುಮಾರು ಅರವತ್ತು ಕೆ.ಜಿಯಷ್ಟಿದ್ದ ಅಕ್ಕಿ ನಾಪತ್ತೆಯಾಗಿತ್ತು.

ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಠಾಣಾ ಕ್ರೈಂ ಎಸ್ಸೈ ಪ್ರಕಾಶ್ ತಂಡ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ ಆಗಮಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೋಲಿಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.