ಮೂಲ್ಕಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷರು, ಬಿಲ್ಲವ ಮುಖಂಡ, ಸಮಾಜ ಸೇವಕ ದಿ| ಜಯ ಸಿ ಸುವರ್ಣರ ದ್ವಿತೀಯ ವರ್ಷದ ಸಂಸ್ಮರಣೆ ಶುಕ್ರವಾರ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ ಜಯ ಸುವರ್ಣ ವ್ಯಕ್ತಿಯಲ್ಲ, ಅವರೊಂದು ಶಕ್ತಿ, ಅವರ ಹಾದಿಯಲ್ಲೇ ನಾನು ಸಾಗುತ್ತಿದ್ದೇನೆ. ಅವರೇ ನನಗೆ ಪ್ರೇರಣೆ, ಭಾರತ್ ಬ್ಯಾಂಕ್ ನಿಂದ ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿದ್ದಾರೆ. ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಜಯ ಸಿ ಸುವರ್ಣ ಅವರು ಮಂಗಳೂರು ಕುದ್ರೋಳಿ ದೇವಸ್ಥಾನ, ಕಟಪಾಡಿ ವಿಶ್ವನಾಥ ಕ್ಷೇತ್ರ, ಗೆಜ್ಜೆಗಿರಿ ನಂದನ ಬಿತ್ತಿಲ್ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಮುಂದಿನ ದಿನಗಳಲ್ಲಿ ಬಿಲ್ಲವ ಸಮಾವೇಶವನ್ನು ಮಾಡುವ ಯೋಜನೆಯನ್ನು ಬಿಲ್ಲವ ಮಹಾಮಂಡಲ ಹಾಕಿಕೊಂಡಿದೆ ಎಂದರು.
ಜಯ ಸಿ ಸುವರ್ಣರ ಎರಡನೇ ವರ್ಷದ ಸಂಸ್ಮರಣೆ ನಮ್ಮ ಸಮಾಜಕ್ಕೆ ದುಃಖದ ವಿಷಯ, ನಾರಾಯಣ ಗುರುಗಳಂತೆ ಸಮಾಜಕ್ಕೆ ಗುರುಗಳಾಗಿ ನಮಗೆಲ್ಲ ಸಮಾಜ ಸೇವೆ ಮಾಡಲು ಪ್ರೇರಣೆಯಾಗಿದ್ದಾರೆ ಎಂದರು.
ಉಡುಪಿಯ ಹರ್ಷದ ಆಡಳಿತ ನಿರ್ದೇಶಕರಾದ ಸೂರ್ಯಪ್ರಕಾಶ್ ಕೆ ಮಾತನಾಡಿ ಒಬ್ಬ ವ್ಯಕ್ತಿ ಸಮಾಜಕ್ಕೆ ಎಷ್ಟನ್ನು ಕೊಡಲು ಸಾಧ್ಯವೋ ಅಷ್ಟನ್ನು ಕೊಟ್ಟಿದ್ದಾರೆ. ಅವರೊಂದು ಸಮಾಜದ ಬೆಳಕು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ನಾವೆಲ್ಲ ಜೀವಿಸಬೇಕು ಎಂದರು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪದಾಧಿಕಾರಿಗಳು, ಬಿಲ್ಲವ ಮುಖಂಡರು, ಜಯ ಸಿ ಸುವರ್ಣರ ಅಭಿಮಾನಿಗಳು , ಮತ್ತಿತರರು ಉಪಸ್ಥಿತರಿದ್ದರು.