ಕಾಪು : ಪ್ರೆಸ್ ಕ್ಲಬ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ
Posted On:
23-10-2022 10:45AM
ಕಾಪು : ಬಲಿ ಚಕ್ರವರ್ತಿ ಮೂಲಸಂಸ್ಕೃತಿಯ ಪ್ರತಿನಿಧಿ ಇದ್ದಂತೆ. ಬಲಿಯೇಂದ್ರನನ್ನು ಪುರಾಣದ ಮತ್ತು ತುಳುನಾಡಿನ ಬಲಿಯೇಂದ್ರ ಎಂದು ವಿಭಾಗಿಸಬಹುದು. ಈ ಕಲ್ಪನೆ ಒಂದೆಡೆ ವೈದಿಕತೆಯನ್ನು ಮತ್ತೊಂದೆಡೆ ಜಾನಪದದ ತಳಹದಿಗೆ ಒತ್ತು ನೀಡಿದೆ. ಬಲಿಯೇಂದ್ರನನ್ನು ಸ್ವೀಕರಿಸುವ ಗುಣ ಭಿನ್ನವಾಗಿದೆ. ಮುಂದೆ ಜನಪದರ ಆಚರಣೆಯೊಂದಿಗೆ ವೈದಿಕ ಆಚರಣೆಯ ಸುಗಮವಾದ ಸಮಾಗಮವಾಯಿತು. ದೀಪಾವಳಿ ಮೂರು ದಿನದ ಆಚರಣೆ. ಇದು ಸುಖ ಸಮೃದ್ಧಿಯ ಹಬ್ಬ ಎಂದು ಹಿರಿಯ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹೇಳಿದರು.
ಅವರು ಶನಿವಾರ ಕಾಪು ಪತ್ರಕರ್ತರ ಸಂಘದಲ್ಲಿ ಜರಗಿದ ದೀಪಾವಳಿ ಹಬ್ಬದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಬ್ಬ ಎಂದರೆ ಸಂತೋಷ. ಪ್ರಖರವಾದ ವಿದ್ಯುತ್ ದೀಪದ ಮುಂದೆ ಹಣತೆಯ ದೀಪದ ಪ್ರಜ್ವಲತೆ ಕ್ಷೀಣವಾಗಿದೆ. ದೀಪದ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಮಾತನಾಡಿ ಹಿಂದಿನ ದೀಪಾವಳಿಯಲ್ಲಿ ಬಡತನದೊಂದಿಗೆ ಸಂತಸವಿತ್ತು. ಇಂದು ಜನರು ಸಿರಿವಂತರಾದರೂ ದೀಪಾವಳಿ ಆಚರಣೆಗಳು ಮಹತ್ವ ಇಲ್ಲದಂತಾಗಿದೆ ಎಂದರು.
ಈ ಸಂದರ್ಭ ಕಾಪು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು, ಕಾರ್ಯದರ್ಶಿ ಪುಂಡಲೀಕ ಮರಾಠೆ, ಪತ್ರಕರ್ತ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.