ಕಳತ್ತೂರಿನಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ
Posted On:
25-10-2022 09:10PM
ಕಾಪು : ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಕಳತ್ತೂರು ಶೇಖರ ಬಿ. ಶೆಟ್ಟಿ ನೇತ್ರತ್ವದಲ್ಲಿ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಅಂಧತ್ವ ನಿವಾರಣ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿತ್ಯವಾರ ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಆಡಳಿತ ನಿರ್ದೇಶಕರಾದ ಡಾ. ಕೃಷ್ಣಪ್ರಸಾದ್ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸೆಯನ್ನು ಕೊಡಿಸುವುದೇ ನಮ್ಮ ಶಿಬಿರದ ಉದ್ದೇಶವಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಶೇಖರ್ ಬಿ.ಶೆಟ್ಟಿ ಇವರ ಸೇವೆಯನ್ನು ಕೊಂಡಾಡಿದರು.
ಮುಖ್ಯ ಅತಿಥಿಯಾಗಿ ಉಡುಪಿಯ ನ್ಯಾಯವಾದಿ ಕುತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಶೆಟ್ಟಿ ಕಳತ್ತೂರು ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಚಿಕಿತ್ಸೆಯು ಸಿಗಬೇಕು. ಸಮಾಜಕ್ಕೆ ತುಂಬಾ ಉಪಕಾರ ಮಾಡುವ ಉದ್ದೇಶದಿಂದ ಈ ಶಿಬಿರ ನಡೆಸಲಾಗುತ್ತಿದೆ. ಶೇಖರ ಬಿ ಶೆಟ್ಟಿಯವರು ಈ ಭವ್ಯವಾದ ಸಭಾಂಗಣವನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಿ ಹಲವಾರು ಸಮಾಜ ಸೇವೆ ಮಾಡಿ ಪ್ರಖ್ಯಾತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಖ್ಯಾತ ನೇತ್ರ ತಜ್ಞರಾದ ಡಾ. ಕೃಷ್ಣಪ್ರಸಾದ್ ಇವರನ್ನು ಹಿರಿಯರಾದ ವಾಸು ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ಸಭಾಧ್ಯಕ್ಷತೆಯನ್ನು ಶೇಖರ ಬಿ. ಶೆಟ್ಟಿ ವಹಿಸಿದರು.
ಮುಖ್ಯ ಅತಿಥಿಯಾಗಿ ಜನ ಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ.ಶೆಟ್ಟಿ ಕಳತೂರು, ಸಮಾಜ ಸೇವಾ ವೇದಿಕೆ ಅಧ್ಯಕ್ಷ ಉದ್ಯಮಿ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಳತ್ತೂರು ರಾಘವೇಂದ್ರ ಭಟ್, ಜಯಲಕ್ಷ್ಮಿ ಆಳ್ವ ಪಾದೂರು ಗುತ್ತು, ಹಿರಿಯರಾದ ವಾಸು ಶೆಟ್ಟಿ ಕಳತೂರು, ಡಾ. ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ ಕುಮಾರ್ ಹೆಗ್ಡೆ ನಿರೂಪಿಸಿದರು. ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ ಡಿ ಶೆಟ್ಟಿ ವಂದಿಸಿದರು.