ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅದಮಾರು : ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು : ಕೋಟಿ ಕಂಠ ಗಾಯನ

Posted On: 28-10-2022 03:25PM

ಅದಮಾರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ವತಿಯಿಂದ ರಾಜ್ಯದಾದ್ಯಾಂತ ಆಯೋಜಿಸಲಾದ 67ನೇ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ನನ್ನ ನಾಡು - ನನ್ನ ಹಾಡು ಸಮೂಹ ಗೀತೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವು ಶುಕ್ರವಾರ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಅದಮಾರಿನಲ್ಲಿ ನಡೆಯಿತು.

ಉಚ್ಚಾರ ಸ್ಪಷ್ಟತೆಯೊಂದಿಗೆ ಬರೆದಂತೆ ಓದುವ ಹಾಗೂ ಓದಿದಂತೆ ಬರೆಯಲ್ಪಡುವ ಭಾಷೆ ಕನ್ನಡ. ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದಾರೆ. ಇವುಗಳನ್ನು ಹಾಡುವುದರಿಂದ ಮತ್ತು ಆಲಿಸುವುದರಿಂದ ನಮ್ಮಲ್ಲಿ ನಾಡು ನುಡಿಯ ಬಗೆಗಿರುವ ಅಭಿಮಾನ ಹೆಚ್ಚಾಗುತ್ತದೆ. ಈ ದೃಷ್ಟಿಯಿಂದ ಈ ಗೀತೆಗಳು ಕನ್ನಡದ ಶಕ್ತಿ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕಲಿಯಲು ಹಲವು ಭಾಷೆಗಳಿದ್ದರೂ, ವ್ಯವಹರಿಸಲು ಮಾತೃ ಭಾಷೆಯೇ ಇರಲಿ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈಯವರು ನುಡಿದರು.

ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಕಾಂತ್ ರಾವ್‍ರವರು ಸಂಕಲ್ಪ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ನಾಯಕ್ ಮತ್ತು ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿಶ್ಮಿತಾ ಶೆಟ್ಟಿ, ಸಂಸ್ಥೆಯ ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಬಾರಿಸು ಕನ್ನಡ ಡಿಂಡಿಮವ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಕನ್ನಡದ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಸಂಸ್ಕೃತ ಉಪನ್ಯಾಸಕರಾದ ಡಾ. ಜಯಶಂಕರ್ ಕಂಗಣ್ಣಾರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಸಂಜೀವ ನಾಯ್ಕ್ ರವರು ವಂದಿಸಿದರು.