ಪಡುಬಿದ್ರಿ : ಶ್ರೀ ವೆಂಕಟರಮಣ ದೇವಳಕ್ಕೆ ಪಾದಯಾತ್ರೆ ಕೈಗೊಂಡ ಶ್ರೀ ವಾಮನಾಶ್ರಮ ಸ್ವಾಮೀಜಿ ಭೇಟಿ
Posted On:
30-10-2022 01:44PM
ಪಡುಬಿದ್ರಿ : ವಿಶ್ವಪ್ರಸಿದ್ಧ ಗೋಕರ್ಣ ಸಮೀಪದ ಹಳದಿಪುರದ ವೈಶ್ಯ ವಾಣಿ ಸಮಾಜದ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಕಳೆದ ವಿಜಯದಶಮಿ ಅಕ್ಟೋಬರ್ ೫ ರಂದು ತಮ್ಮ ಶಿಷ್ಯರೊಂದಿಗೆ ಆದಿ ಶಂಕರಾಚಾರ್ಯರ ಮೂಲಸ್ಥಾನ ದಕ್ಷಿಣದ ಕೇರಳದ ಕಾವಡಿಯಿಂದ ಉತ್ತರದ ಕಾಶೀ ವಿಶ್ವನಾಥ ಕ್ಷೇತ್ರದವರೆಗೆ ಪಾದಯಾತ್ರೆ ಆರಂಭಿಸಿದ್ದು ರವಿವಾರ ಕಾಪು ತಾಲೂಕಿನ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ಕೊಟ್ಟರು.
ಈ ಸಂದರ್ಭ ಮಾಧ್ಯಮದವರೊಡನೆ ಮಾತನಾಡಿದ ಅವರು ಕಾಶಿಯಲ್ಲಿ ನಮ್ಮ ಸಂಸ್ಥಾನದ ಮೂಲಮಠ ಇದ್ದು ನಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆಯಿಂದ ಮೂಲ ಮಠವನ್ನು ಪುನರುತ್ಥಾನಗೊಳಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಅಕ್ಷಯ ತೃತೀಯ ಎಪ್ರಿಲ್ 23 ರಂದು ಕಾಶಿ ತಲುಪುವ ಯೋಜನೆ ಇದೆ ಎಂದು ಹೇಳಿದರು.
ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಮೀಜಿಯವರನ್ನು ಸ್ವಾಗತಿಸಿ ಬರ ಮಾಡಿಕೊಂಡರು.
ವಿಶ್ರಾಂತಿ ನಂತರ ಸ್ವಾಮೀಜಿಯವರು ಕಾಪು ಕಡೆಗೆ ಪಾದಯಾತ್ರೆ ಬೆಳೆಸಿ ಇಂದು ಕಾಪು ಹಳೆ ಮಾರಿಗುಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಈ ಸಂದರ್ಭ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.