ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ದೇಶದಲ್ಲಿ ಶೇ. 20 ರಷ್ಟು ರಕ್ತದ ಕೊರತೆಯಿದೆ : ಡಾ| ವೀಣಾ ಕುಮಾರಿ

Posted On: 30-10-2022 11:24PM

ಕಾಪು : ರಕ್ತದಾನ ಮಹಾದಾನವಾಗಿದ್ದು ದೇಶದಲ್ಲಿ ಶೇ.20ರಷ್ಟು ರಕ್ತದ ಕೊರತೆ ಕಾಡುತ್ತಿದೆ. ರಕ್ತದ ಅಲಭ್ಯತೆಯಿಂದಾಗಿ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದು ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮತ್ತು ಜನರ ಜೀವವನ್ನು ಉಳಿಸಲು ಕೈಜೋಡಿಸಬೇಕಿದೆ ಎಂದು ಉಉಡಪಿ ಜಿಲ್ಲಾಸ್ಪತ್ರೆಯ ರಕ್ತ ನಿಧೀಕೇಂದ್ರದ ಮುಖ್ಯಸ್ಥೆ ಡಾ| ವೀಣಾ ಕುಮಾರಿ ಹೇಳಿದರು. ಕಾಪು ಧರಣಿ ಸಮಾಜ ಸೇವಾ ಸಂಘ, ಕಾಪು ಜೇಸಿಐ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಮತ್ತು ರಕ್ತ ನಿಧಿಕೇಂದ್ರದ ಸಹಯೋಗದಲ್ಲಿ ಕಾಪು ವೀರಭದ್ರ ಸಭಾಭವನದಲ್ಲಿ ರವಿವಾರ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತ ಸಂಗ್ರಹದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಇದನ್ನು ಕಾಪಾಡಿಕೊಂಡು ಬರುವಲ್ಲಿ ಯುವಜನರ ಸಹಕಾರ ಅತೀ ಅಗತ್ಯವಾಗಿ ದೊರಕಬೇಕಿದೆ ಎಂದರು.

ಸಮ್ಮಾನ : ದಾಖಲೆಯ 60ನೇ ಬಾರಿ ರಕ್ತದಾನ ಮಾಡಿದ ಸೂರಿ ಶೆಟ್ಟಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ ಐವತ್ತಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ ಪಾದೂರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರಂದಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ಶೆಟ್ಟಿ ಮೂಳೂರು ವಂದಿಸಿದರು.